Menu

ಶ್ರೀ ಮುರುಘಾಮಠ,
ಚಿತ್ರದುರ್ಗ - 577502
ದೂ. 08194-222250,
ಫ್ಯಾಕ್ಸ್ : 08194-225164
Open:08:00 AM - 1:00PM ,
04:00PM-8:00PM

 

About Mut-History

About Mutt-History

ಶೂನ್ಯಪೀಠ ಪರಂಪರೆ - ಮುರಿಗಾ ಪರಂಪರೆ
ಚಿತ್ರದುರ್ಗದ ಬೆಟ್ಟವನ್ನೇರಿ, ಸುಂದರವಾದ ಹೆಬ್ಬಂಡೆಗಳ ನಡುವೆ ಇರುವ ಸಂಪಿಗೆ ಸಿದ್ಧೇಶ್ವರ ದೇವಸ್ಥಾನದ ಪರಿಸರಕ್ಕೆ ಬಂದರೆ, ಅದರ ಮುಂದೆ ಪೂರ್ವಾಭಿಮುಖವಾಗಿ ಸಾಲುಕಂಬಗಳನ್ನುಳ್ಳ ಮುಖಮಂಟಪಶಾಲೆಯ ವಿಶಾಲ ಕಟ್ಟಡವೊಂದು ನೋಟಕರ ದೃಷ್ಟಿಯನ್ನು ಸೆಳೆಯುತ್ತದೆ. ಅದರೊಳಗೆ ಪ್ರವೇಶಿಸಿ ಒಂದು ಸುತ್ತು ಹಾಕಿ ಬಂದರೆ, ಅನೇಕ ಕಂಬಗಳು, ಅಂಕಣಗಳು, ಕೋಣೆಗಳಿಂದ ಕೂಡಿದ ಆ ಕಟ್ಟಡ ಹಿಂದೆ ಒಂದು ಕಾಲಕ್ಕೆ ಒಂದು ಪ್ರಮುಖ ಸ್ಥಳವಾಗಿದ್ದಿರಬೇಕು ಎಂಬ ಕಲ್ಪನೆ ಬರುತ್ತದೆ. ಇದೇ ಮೇಲುದುರ್ಗದ ಮುರುಘರಾಜೇಂದ್ರ ಬೃಹನ್ಮಠ. ಚಿತ್ರದುರ್ಗದ ಪ್ರಾಚೀನ ಪರಿಸರದಲ್ಲಿಯೇ ಅತ್ಯಂತ ದೊಡ್ಡದಾದ ಪ್ರಾಚ್ಯ ಸ್ಮಾರಕ. ಹಾಗೆಯೇ ಚಿತ್ರದುರ್ಗ ನಗರದ ಪಶ್ಚಿಮ ಹೊರವಲಯದಲ್ಲಿ ದಾವಣಗೆರೆಗೆ ಹೋಗುವ ರಸ್ತೆಯಲ್ಲಿ ಬಂದರೆ, ವಿಶಾಲವಾದ ಆವರಣದಲ್ಲಿ ಎತ್ತರವಾಗಿ ನಿಂತಿರುವ ಮಹಾದ್ವಾರ, ಒಳಗೆ ಪ್ರವೇಶಿಸಿದರೆ ಅಲ್ಲಿ ಮತ್ತೊಂದು ಬೃಹತ್ ಕಟ್ಟಡ, ಒಳಗೆ ಬಂದರೆ, ನಾಲ್ಕು ದಿಕ್ಕುಗಳಲ್ಲಿಯೂ ಕಲ್ಲಿನ ಸಾಲುಕಂಬಗಳಿರುವ ರಾಜಾಂಗಣ, ಅದರ ದಕ್ಷಿಣಕ್ಕೆ ಪ್ರಾಚೀನವಾದ ಕರ್ತೃಗದ್ದುಗೆ, ಅದರ ಸುತ್ತ ಚೌಕಾಕಾರವಾಗಿ ಅನೇಕ ಅಂಕಣಗಳ ಕಟ್ಟಡಸಂಕೀರ್ಣ, ಇವೇ ಮುಂತಾದವು ನೋಡುಗರ ಮನಸ್ಸನ್ನು ಸೆಳೆಯುತ್ತವೆ. ಇದೇ ಬೆಟ್ಟದ ಕೆಳಗಿರುವ ಮುರುಘರಾಜೇಂದ್ರ ಬೃಹನ್ಮಠ. ಮುಂದೆ ಹಿಂದೆ ಎರಡು ಕೆರೆಗಳು, ಬಲಗಡೆ ಸುಂದರವಾದ ಉದ್ಯಾನವನ, ಎಡಗಡೆ ಸುಂದರವಾದ ತೆಂಗಿನ ತಂಪು ತೋಟ, ಎಲ್ಲೆಲ್ಲೂ ಶಾಂತತೆ- ಇಂತಹ ಸುಂದರ ಪ್ರಶಾಂತ ಪರಿಸರದಲ್ಲಿ ಕರ್ನಾಟಕದ ಪ್ರಸಿದ್ಧ ಮಠಗಳಲ್ಲಿ ಒಂದಾದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠವು ನೆಲೆಗೊಂಡಿದೆ. ಕರ್ನಾಟಕದ, ಅಷ್ಟೇ ಏಕೆ, ದಕ್ಷಿಣ ಭಾರತದ ಧಾರ್ಮಿಕ ಇತಿಹಾಸದಲ್ಲಿ ಒಂದು ಉಜ್ವಲ ಹೆಸರು ಚಿತ್ರದುರ್ಗದ ಬೃಹನ್ಮಠದ್ದು. ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಾಂಸ್ಕೃತಿಕ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು, ನಾಡಿನ ಮುನ್ನಡೆಯಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರುವ ಈ ಮಠದ ಇತಿಹಾಸ ಬಹು ವಿಸ್ತಾರವಾದದ್ದು. ಚಿತ್ರದುರ್ಗದಲ್ಲಿ ಈ ಮಠ ಸ್ಥಾಪನೆಗೊಂಡ ಕಾಲದಿಂದ ನೋಡುವುದಾದರೆ, ಮೂರು ಶತಮಾನಗಳಿಗೂ ಹೆಚ್ಚಿನ ಗಣ್ಯ ಪರಂಪರೆಯನ್ನು ಇದು ಹೊಂದಿದೆ.

ಶೂನ್ಯಪೀಠ ಪರಂಪರೆ
ಮುರಿಗೆ ಮಠ, ಮುರಿಗಾ ಮಠ, ಮುರುಗಿ ಮಠ, ಮುರುಘಾ ಮಠ, ಮುರುಘರಾಜೇಂದ್ರ ಮಠ, ವಿಶಾಲಮಠ, ಮಹಾಮಠ, ಬೃಹನ್ಮಠ ಮುಂತಾದ ವಿವಿಧ ಬಗೆಯ ಹೆಸರುಗಳ ಈ ಮಠ, ಕ್ರಿ.ಶ. ೧೨ನೆಯ ಶತಮಾನದ ಮಹಾಶರಣರಾದ ಅಲ್ಲಮಪ್ರಭುವಿನಿಂದ ಮೊದಲುಗೊಂಡು ಚೆನ್ನಬಸವಣ್ಣನವರಿಂದ ಮತ್ತು ಇನ್ನು ಹಲವರಿಂದ ಮುಂದುವರಿದು ಬಂದು ‘ಶೂನ್ಯಪೀಠ' ಎಂದು ಹೆಸರಾಗಿದೆ. ಇಲ್ಲಿ ‘ಶೂನ್ಯಪೀಠ' ಎಂಬ ಹೆಸರಿನ ಅರ್ಥ ಮತ್ತು ಮಹತ್ತ್ವವನ್ನು ಸ್ವಲ್ಪ ಪರಿಶೀಲಿಸಬೇಕಾಗುತ್ತದೆ. ಬಸವಣ್ಣನವರು ಕ್ರಿ.ಶ. ೧೨ನೇ ಶತಮಾನದಲ್ಲಿ ಶೂನ್ಯಸಿಂಹಾಸನವನ್ನು ರಚಿಸಿದರೆಂದು, ಅದರ ಮೊದಲ ಅಧ್ಯಕ್ಷರಾಗಿ ಅಲ್ಲಮಪ್ರಭುದೇವರು ಅದನ್ನು ಏರಿದರೆಂದು, ವೀರಶೈವ ಸಾಹಿತ್ಯದಿಂದ ತಿಳಿಯುತ್ತದೆ. ಈ ಸಿಂಹಾಸನ ಸ್ಥೂಲವೂ ಭೌತಿಕವೂ ಆದುದಾಗಿತ್ತೇ? ಅಥವಾ ಸೂಕ್ಷ್ಮವೂ ಸಾಂಕೇತಿಕವೂ ಆದುದಾಗಿತ್ತೇ? ಈ ಬಗ್ಗೆ ಜಿಜ್ಞಾಸೆ ನಡೆದದ್ದುಂಟು. ಆ ವಿಷಯ ಏನಾದರೂ ಇರಲಿ, ಅದನ್ನು ಆಧ್ಯಾತ್ಮಿಕ ಸಿದ್ಧಿಯ ಉನ್ನತ ನಿಲವಿನ ಸಾಂಕೇತಿಕ ಸ್ಥಾನ ಎಂದು ಭಾವಿಸುವುದು ಉಚಿತ ಎನಿಸುತ್ತದೆ. ಆದರೆ ಶೂನ್ಯಪೀಠದ ಪರಂಪರೆಯನ್ನು ವಿವರಿಸುವ ಕೆಲವು ಆಕರಗಳಲ್ಲಿ ಅದು ಒಂದು ಭೌತಿಕ ಸ್ಥೂಲ ಪೀಠವಾಗಿತ್ತೇನೋ ಎಂಬಂತೆ ಸೂಚಿಸಿರುವುದೂ ಇಷ್ಟರ ಜೊತೆಗೆ ಅದನ್ನು ಶಿಖಾ ಶೈಲ ಮುದ್ರೆ ಮೊದಲಾದವುಗಳ ಜೊತೆಗಿನ ಒಂದು ವಸ್ತುವಾಗಿ ನಿರೂಪಿಸಿರುವುದೂ ಆಶ್ಚರ್ಯಕರವಾಗಿದೆ. ಹೀಗಾಗಿ ಶೂನ್ಯಪೀಠ ಪರಂಪರೆ ಎಂಬ ಮಾತನ್ನು ಅಲ್ಲಮಪ್ರಭುದೇವರ ಪರಂಪರೆ ಅಥವಾ ಶರಣರು ಪ್ರತಿಪಾದಿಸಿದ ಶೂನ್ಯತತ್ತ್ವದ ಮಾರ್ಗದ ಪರಂಪರೆ ಎನ್ನುವ ಅರ್ಥದಲ್ಲಿ ನಾವು ತೆಗೆದುಕೊಳ್ಳುವುದು ಸೂಕ್ತವಾಗಿ ಕಾಣುತ್ತದೆ. ಆ ದೃಷ್ಟಿಯಿಂದ ಆ ಹೆಸರು ಅದಕ್ಕೆ ಸಲ್ಲುತ್ತದೆ. ಅದರಿಂದ ಶೂನ್ಯಪೀಠ ಎಂಬುದಕ್ಕೆ ಯಾವುದೇ ಉತ್ಪ್ರೇಕ್ಷೆಯ ಭಾವುಕತೆಯ ಅವಾಸ್ತವಿಕತೆಯ ಸ್ಪರ್ಶ ಉಂಟಾಗುವುದು ತಪ್ಪಿದಂತಾಗುತ್ತದೆ. ಈ ದೃಷ್ಟಿಯಿಂದ ‘ಶೂನ್ಯಪೀಠ ಪರಂಪರೆ' ಎಂಬ ಮಾತನ್ನು ಇಲ್ಲಿ ತೆಗೆದುಕೊಳ್ಳಲಾಗಿದೆ.

ಮುರಿಗೆ ಶಾಂತವೀರ ದೇಶಿಕರು
ಚಿತ್ರದುರ್ಗದಲ್ಲಿ ಹದಿನೇಳನೆಯ ಶತಮಾನದ ಕೊನೆಯಲ್ಲಿ ದೊರೆ ಬರಮಣ್ಣ ನಾಯಕನ ಕಾಲಾವಧಿಯಲ್ಲಿ(೧೬೮೯-೧೭೨೧) ಮುರಿಗೆ ಶಾಂತವೀರ ದೇಶಿಕರು ಅಥವಾ ಸ್ವಾಮಿಗಳವರಿಂದ ಚಿತ್ರದುರ್ಗದಲ್ಲಿ ಮುರಿಗೆ ಮಠ ಪ್ರಾರಂಭವಾಯಿತು. ಹೆಚ್ಚಿನ ಆಕರಗಳಲ್ಲಿ ಇವರನ್ನು ಮುರಿಗೆ ಶಾಂತವೀರ ರೆಂದು ಕರೆಯಲಾಗಿದ್ದರೂ ಕೆಲವೇ ಕೆಲವು ಆಕರಗಳಲ್ಲಿ ಇವರನ್ನು ಮುರಿಗೆಯ ರುದ್ರ ಎಂದೂ ಕರಿಬಸವರಾಜ ಎಂದೂ ಕರೆದಿರುವುದುಂಟು. ಶಾಂತವೀರ ಸ್ವಾಮಿಗಳವರೂ ಸೇರಿಸಿದಂತೆ ಅವರ ಪೂರ್ವದ ಪರಂಪರೆಯ ಎಲ್ಲ ಗುರುಗಳು ಸದಾ ಧರ್ಮ ಸಂಚಾರದಲ್ಲೇ ಬಂದಿದ್ದರು. ಆದರೆ ಶಾಂತವೀರ ಸ್ವಾಮಿಗಳು ಬರಮಣ್ಣನಾಯಕನ ಭಕ್ತಿ ಕೈಂಕರ್ಯದ ನಿಮಿತ್ತವಾಗಿ ಮತ್ತು ಆ ವೇಳೆಗೆ ಅವರು ತೀರಾ ಮುಪ್ಪಿನ ವಯಸ್ಸಿನವರಾಗಿದ್ದುದರಿಂದ ಅವರು ಚಿತ್ರದುರ್ಗದಲ್ಲಿ ನೆಲೆಸಬೇಕಾಗಿ ಬಂತು. ಆ ತರುವಾಯ ಶೂನ್ಯಪೀಠದ ಪರಂಪರೆಯ ಗುರುಗಳು ಸಂಚಾರವನ್ನು ಮೊಟಕುಗೊಳಿಸಿ ಚಿತ್ರದುರ್ಗವನ್ನು ತಮ್ಮ ಕಾರ್ಯಕ್ಷೇತ್ರನ್ನಾಗಿ ಮಾಡಿಕೊಂಡು ಕಾರ್ಯೋನ್ಮುಖರಾದರು. ಹೀಗಾಗಿ ಮೊದಲಿಗೆ 'ಚರ'ವಾಗಿದ್ದ ಶೂನ್ಯಪೀಠ ಆಗ ‘ಸ್ಥಿರ'ವಾಯಿತು. ಚಿತ್ರದುರ್ಗದಲ್ಲಿ ಮುರುಘರಾಜೇಂದ್ರ ಮಠ ಅಸ್ತಿತ್ವಕ್ಕೆ ಬಂದದ್ದು ಕ್ರಿ.ಶ. ೧೭ನೇ ಶತಮಾನದ ಕೊನೆಯಲ್ಲಿ. ಈ ಮಠ ಇಲ್ಲಿ ಪ್ರಾರಂಭವಾದುದರ ಹಿನ್ನೆಲೆ ಕುತೂಹಲಕಾರಿಯಾಗಿದೆ: ಚಿತ್ರದುರ್ಗ ಪ್ರಾಂತದ ಬಿಳಿಚೋಡು ಎಂಬ ಗ್ರಾಮದಲ್ಲಿ ದನಗಾಹಿಯಾಗಿದ್ದ ಹುಡುಗನೊಬ್ಬ, ಒಮ್ಮೆ ಅಡವಿಯಲ್ಲಿ ದನಗಳನ್ನು ಮೇಯಲು ಬಿಟ್ಟು, ಮರವೊಂದರ ಕೆಳಗೆ ಮಲಗಿದಾಗ ನಾಗರಹಾವೊಂದು ಬಂದು ಅವನ ತಲೆಯ ಬಳಿ ಎಡೆ ಅಗಲಿಸಿ ನೆರಳು ಮಾಡಿತು. ಆಗ ಸಂಚಾರ ಮಾಡುತ್ತಾ ಅತ್ತ ಕಡೆಯಲ್ಲಿ ಬಂದ ಮುರಿಗೆ ಶಾಂತವೀರ ಸ್ವಾಮಿಗಳಿಗೆ ಆ ದೃಶ್ಯ ಕಂಡಿತು. ಅವರು ಹತ್ತಿರ ಬರುತ್ತಿದ್ದಂತೆ ಹಾವು ಅಲ್ಲಿಂದ ಹೊರಟು ಹೋಯಿತು. ಸ್ವಾಮಿಗಳು ಆ ಹುಡುಗನನ್ನು ಎಬ್ಬಿಸಿ, “ನಿನ್ನ ಮೇಲೆ ಶಿವನ ಕೃಪೆಯಾಗಿದೆ. ನೀನು ದುರ್ಗದ ದೊರೆಯಾಗುವೆ'' ಎಂದು ಆಶೀರ್ವದಿಸಿ ಮುಂದೆ ನಡೆದರು. ಅವರು ಹೇಳಿದಂತೆಯೇ ಮುಂದೆ ಆ ಹುಡುಗ ದುರ್ಗದ ದೊರೆಯಾಗಿ, ‘ಬಿಚ್ಚುಗತ್ತಿ ಬರಮಣ್ಣ ನಾಯಕ' (೧೬೮೯-೧೭೨೧) ಎಂದು ಖ್ಯಾತನಾದ. ಸಾಮಾನ್ಯನೊಬ್ಬ ಮುಂದೆ ರಾಜನಾಗುವನೆಂದು ಸೂಚಿಸಲು ಭಾರತೀಯ ಜನಪದ ಕಥೆ, ಐತಿಹ್ಯಗಳಲ್ಲಿ ಬರುವ ಆಶಯ ರೂಪದ ಒಂದು ವೃತ್ತಾಂತ ಇದು ಎಂದು ಅನ್ನಿಸುವುದಾದರೂ, ಬರಮಣ್ಣ ನಾಯಕನಿಗೆ ಕಿರಿಯ ವಯಸ್ಸಿನಲ್ಲಿಯೇ ಯಾವುದೋ ಒಂದು ಸಂದರ್ಭದಲ್ಲಿ ಮುರಿಗೆ ಶಾಂತವೀರ ಸ್ವಾಮಿಗಳ ಸಂಪರ್ಕ, ಸಾನ್ನಿಧ್ಯ, ಆಶೀರ್ವಾದಗಳು ಲಭಿಸಿದ್ದವು ಎಂದು, ಅದಕ್ಕೆಂದೇ ಅವರಲ್ಲಿ ಅವನಿಗೆ ಬಹಳವಾದ ಭಕ್ತಿ, ಗೌರವ, ಶ್ರದ್ಧೆಗಳಿದ್ದಾವೆಂದು ಈ ವೃತ್ತಾಂತದಿಂದ ಭಾವಿಸಬಹುದಾಗಿದೆ. ಅಂತಹವರ ಆಶೀರ್ವಾದದಿಂದಲೇ ತಾನು ದುರ್ಗದ ದೊರೆಯಾದೆ ಎಂಬ ದೃಢವಾದ ನಂಬಿಕೆ ಅವನಿಗೆ ಇದ್ದುದೇ ಅವನು ಮುಂದೆ ಮುರಿಗೆ ಸ್ವಾಮಿಗಳಿಗಾಗಿ ಮಠ ಕಟ್ಟಿಸಿ ಇಲ್ಲಿಗೆ ಅವರನ್ನು ಬರಮಾಡಿಕೊಳ್ಳಲು ಕಾರಣವಾಯಿತೆಂದು ಕಾಣುತ್ತದೆ. ಹಾಗಾಗಿ ಕ್ರಿ.ಶ. ೧೬೮೯ರಲ್ಲಿ ಬರಮಣ್ಣ ನಾಯಕನು ಪಟ್ಟಕ್ಕೆ ಬಂದ ಪ್ರಥಮದಲ್ಲಿಯೇ ಮಾಡಿದ ಕೆಲಸವೆಂದರೆ ಮೇಲುದುರ್ಗದಲ್ಲಿ ಮುರಿಗೆ ಶಾಂತವೀರ ಸ್ವಾಮಿಗಳಿಗೆ ಮಠವೊಂದನ್ನು ಕಟ್ಟಿಸಲು ಪ್ರಾರಂಭಿಸಿದ್ದು. ಅಂತು ಬರಮಣ್ಣ ನಾಯಕನ ಭಕ್ತಿ ಗೌರವಗಳಿಗೆ ಕಟ್ಟುಬಿದ್ದರೇನೋ ಎಂಬಂತೆ ಸ್ವಾಮಿಗಳು ಬಂದು ಚಿತ್ರದುರ್ಗದಲ್ಲಿ ನೆಲೆಸಿದರು. ಅವರನ್ನು ಕರೆಯಿಸಿಕೊಳ್ಳಲು ಬರಮಣ್ಣ ನಾಯಕ ಎಷ್ಟು ಕಾಳಜಿಯಿಂದ ಪ್ರಯತ್ನ ಮಾಡಿದನೆಂದರೆ ಅವರು ದುರ್ಗಕ್ಕೆ ಆಗಮಿಸುವಂತೆ ಕೋರಿ ಕೆಲವು ಬಿನ್ನಹ ಪತ್ರಗಳನ್ನು ಕಳುಹಿಸಿಕೊಟ್ಟಿದ್ದನೆಂದು, ಸ್ವಾಮಿಗಳು ಆಗ ಸಂಚಾರದಲ್ಲಿದ್ದರೆಂದು ತಿಳಿದುಬರುತ್ತದೆ. ಒಂದು ಬಿನ್ನಹ ಪತ್ರ ಬಂದಾಗ ಸ್ವಾಮಿಗಳು ಸೋದೆಯಲ್ಲಿ ತಂಗಿದ್ದರು. ಸೋದೆಯ ದೊರೆಯು ನಡೆಸುತ್ತಿದ್ದ ಭಕ್ತಿ ಕೈಂಕರ್ಯದಲ್ಲಿ ಅವರು ಕೆಲಕಾಲ ತಂಗಬೇಕಾಯಿತು, ಆ ಮೇಲೆ ಅವರು ತಮ್ಮ ಶಿಷ್ಯ ಪರಿವಾರದೊಂದಿಗೆ ಚಿತ್ರದುರ್ಗದ ಕಡೆ ಹೊರಟರು; ಅವರು ಚಿತ್ರದುರ್ಗಕ್ಕೆ ಅತ್ಯಂತ ಹತ್ತಿರ ಬಂದಾಗ ಕಳ್ಳಹುಣಸೆ ಅಥವಾ ಲಕ್ಷ್ಮೀಸಾಗರ ಎನ್ನುವ ಗ್ರಾಮದ ಬಳಿ ಬಂದಾಗ ಬರಮಣ್ಣ ನಾಯಕ ತನ್ನ ಪರಿವಾರ ಸಮೇತ ಅಲ್ಲಿಗೆ ಹೋಗಿ ಅತ್ಯಂತ ವಿನಯದಿಂದ ಅವರನ್ನು ಕಂಡು ಮೆರವಣಿಗೆಯೊಂದಿಗೆ ಅವರನ್ನು ಚಿತ್ರದುರ್ಗಕ್ಕೆ ಕರೆತಂದಂತೆ ಉಲ್ಲೇಖವಿದೆ. ಹೀಗೆ ಚಿತ್ರದುರ್ಗಕ್ಕೆ ಆಗಮಿಸಿದಾಗ ಸಂಪಿಗೆ ಸಿದ್ಧೇಶ್ವರ ದೇವಾಲಯದ ಎದುರಿಗೆ ಕಟ್ಟಲ್ಪಡುತ್ತಿದ್ದ ಮಠ ಇನ್ನೂ ನಿರ್ಮಾಣ ಹಂತದಲ್ಲಿದ್ದುದರಿಂದ ದೊರೆ ಅವರನ್ನು ನೆಲ್ಲಿಕಾಯಿ ಸಿದ್ಧಪ್ಪನ ಬೆಟ್ಟದ ಮೇಲೆ, ನೆಲ್ಲಿಕಾಯಿ ಸಿದ್ಧೇಶ್ವರನ ಸಮೀಪ ಕೆಲಕಾಲ ಇರಿಸಬೇಕಾಯಿತು, ಆಮೇಲೆ ಅಲ್ಲಿಂದ ಕೆಳಗಿನ ಮಠಕ್ಕೆ ಸ್ವಾಮಿಗಳು ಬಂದರಾದರೂ ಅವರು ಅಲ್ಲಿ ಬಹಳ ಕಾಲ ಇರಲಿಲ್ಲ. ಸ್ವಾಮಿಗಳ ಇಚ್ಛೆಯನ್ನು ಅರಿತ ಬರಮಣ್ಣ ನಾಯಕ ಅವರಿಗಾಗಿ ಊರ ಹೊರಗೆ, ಪಶ್ಚಿಮ ಭಾಗದಲ್ಲಿ ಇನ್ನೊಂದು ಮಠವನ್ನು ಕಟ್ಟಿಸತೊಡಗಿದ, ಸ್ವಾಮಿಗಳು ಅಲ್ಲಿ ಕೆಲಕಾಲ ಇದ್ದರು. ಬರಮಣ್ಣ ನಾಯಕ ಸ್ವಾಮಿಗಳನ್ನು ಕಂಡು ತಾನು ಹಂಪಿ ವಿರೂಪಾಕ್ಷನ ದರ್ಶನಕ್ಕೆ ಅಲ್ಲಿಗೆ ಹೋಗುವುದಾಗಿ ತಿಳಿಸಿ ಸ್ವಾಮಿಗಳ ಆಶೀರ್ವಾದವನ್ನು ಬೇಡಿದಾಗ ಅವರು ಆಶೀರ್ವದಿಸಿ, “ನೀನು ವಿರೂಪಾಕ್ಷ ದರ್ಶನವನ್ನು ಪಡೆದುಕೊಂಡು ಬಾ. ನೀನು ಅಲ್ಲಿಂದ ಮರಳಿ ಬರುವುದರೊಳಗೆ ಇಲ್ಲಿ ಒಂದು ಅದ್ಭುತ ಜರುಗಿರುತ್ತದೆ ಹೋಗು” ಎಂದು ಹೇಳಿದರು. ಅದರಂತೆ ಅವನು ವಾಪಸು ಬರುವ ಹೊತ್ತಿಗೆ ಸ್ವಾಮಿಗಳು ಇಲ್ಲಿ ಲಿಂಗೈಕ್ಯರಾಗಿದ್ದರು; ಆ ದಿನ ಸ್ವಭಾನು ಸಂವತ್ಸರದ ಅಧಿಕ ಶ್ರಾವಣ ಮಾಸದ ಬಿದಿಗೆ ತಿಥಿಯ ಸೋಮವಾರ ಆಗಿತ್ತು. ಅಂದರೆ ಅದು ಕ್ರಿ.ಶ. ೧೭೦೩ರ ಜುಲೈ ೫ನೆಯ ದಿನಾಂಕವಾಗಿತ್ತು. ಮುರಿಗಾ ಶಾಂತವೀರ ಸ್ವಾಮಿಗಳು ಚಿತ್ರದುರ್ಗಕ್ಕೆ ಬರುವ ಹೊತ್ತಿಗೆ ಅವರಿಗೆ ಹಣ್ಣು ಹಣ್ಣು ವಯಸ್ಸಾಗಿತ್ತು ಎಂದು ಈ ಹಿಂದೆಯೇ ಹೇಳಿದೆ. ಅವರ ಶಿಷ್ಯರಲ್ಲೊಬ್ಬರಾದ ಕಂಪಿನಂಜೇದೇವರು ತಮ್ಮ ‘ಮುರಿಗೆ ಸ್ವಾಮಿಗಳ ನಾಂದ್ಯ' ದಲ್ಲಿ ಅವರ ದೇಹದ ಚರ್ಮವೆಲ್ಲ ಸುಕ್ಕುಗಟ್ಟಿದರೂ ಅವರು ಅತ್ಯಂತ ಆರೋಗ್ಯಶಾಲಿಗಳಾಗಿದ್ದರೆಂದು ಬರೆದಿದ್ದಾರೆ. ಅವರು ಲಿಂಗೈಕ್ಯರಾಗುವ ಮುನ್ನ, ನಂಜನಗೂಡು ತಾಲ್ಲೂಕಿನ ದನಗೂರಿನಲ್ಲಿ ಮಠಾಧಿಪತಿಗಳೂ ಮಹಾಕವಿಯೂ ಆಗಿದ್ದ ಷಡಕ್ಷರದೇವರ ವಂಶಕ್ಕೆ ಸೇರಿದವರೂ ತಮ್ಮ ಕೃಪಾಪಾತ್ರರೂ ಆಗಿದ್ದ ಅದೇ ನಂಜನಗೂಡು ತಾಲ್ಲೂಕಿನ ಹುಲ್ಲಳ್ಳಿಯಲ್ಲಿ ಮಠಾಧೀಶರೂ ಉಭಯಭಾಷಾ ವಿಶಾರದರೂ ವಿದ್ವಾಂಸರೂ ಆಗಿದ್ದ ಗುರುಸಿದ್ಧ ದೇವರನ್ನು (ಇಮ್ಮಡಿ ಮುರಿಗೆ ಸ್ವಾಮಿಗಳು) ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ, ತಮ್ಮ ಶಿಷ್ಯವರ್ಗದಲ್ಲೇ ಒಬ್ಬರಾದ ಸೋದೆಯ ಚನ್ನಬಸವ ಸ್ವಾಮಿಗಳನ್ನು ಮರುಉತ್ತರಾಧಿಕಾರಿಯನ್ನಾಗಿ ಮಾಡಿದ್ದರು.
ಮುರಿಗಾ ಶಾಂತವೀರರು ಚಿತ್ರದುರ್ಗಕ್ಕೆ ಬರುವ ಪೂರ್ವದಲ್ಲಿ ಅನೇಕ ವರ್ಷ ಧರ್ಮಸಂಚಾರದಲ್ಲಿ ನಿರತರಾಗಿದ್ದರು. ಮೈಸೂರಿನ ರಾಜರಾದ ರಣಧೀರ ಕಂಠೀರವ ನರಸರಾಜ ಒಡೆಯರು(೧೬೩೮-೧೬೫೯) ಮತ್ತು ದೊಡ್ಡ ದೇವರಾಜ ಒಡೆಯರು(೧೬೬೨-೧೬೭೨) ಸ್ವಾಮಿಗಳಿಗೆ ಭಕ್ತಿಯಿಂದ ನಡೆದುಕೊಂಡದ್ದಲ್ಲದೇ ಅವರ ಆಸ್ಥಾನದಲ್ಲಿ ನಾನಾ ಮತಗಳ ವಿದ್ವಾಂಸರ ಜೊತೆ ಮುರಿಗಾ ಶಾಂತವೀರರು ವಾದ-ಸಂವಾದಗಳನ್ನು ನಡೆಸಲು ಕಾರಣರಾದರು. ಅಲ್ಲಿಯ ವಿದ್ವಾಂಸ ಸಮೂಹ ಅವರ ಸಂಸ್ಕೃತ ಮತ್ತು ತತ್ತ್ವ ಪಾಂಡಿತ್ಯಕ್ಕೆ ತಲೆಬಾಗಿತು. ಅಲ್ಲಿಂದ ಮುಂದೆ ಅವರು ಹೈದರಾಬಾದ್ ಕಡೆ ಪಯಣ ಬೆಳೆಸಿದರು. ಆಗ ಹೈದರಾಬಾದ್-ಸಿಕಂದರಾಬಾದ್‌ಗಳ ನವಾಬನಾಗಿದ್ದ ಕುತುಬ್‌ಷಾ ಬಾದಶಹನ ಆನೆಯೊಂದು ಒಂದು ರೋಗದಿಂದ ಸಾಯುವ ಸ್ಥಿತಿಯಲ್ಲಿದ್ದು, ಮಹಾಮಹಾ ವೈದ್ಯರಿಂದಲೂ ಏನು ಮಾಡಲೂ ಸಾಧ್ಯವಾಗದಿದ್ದಾಗ ದೊರೆ ಯಾರದೋ ಸಲಹೆಯಿಂದ ಅಲ್ಲಿಗೆ ಸ್ವಾಮಿಗಳನ್ನು ಬರಮಾಡಿಕೊಂಡನು. ಅವರು ಆ ಆನೆಯ ರೋಗವನ್ನು ವಾಸಿ ಮಾಡಿದರು. ಹೀಗೆ ಆ ಬಾದಶಹನಿಂದಲೂ ಅವರು ಗೌರವಿತರಾದರು. ಮುಂದೆ ಅವರು ಹರಪನಹಳ್ಳಿಯ ಬಸವಂತನಾಯಕ, ಗದುಗಿನ ಡಾಕಿನ ದೇಸಾಯಿ, ಸ್ವಾದಿಯ ಸದಾಶಿವರಾಯ, ಗುತ್ತವೊಳಲ ಹನುಮಂತರಾಯ, ಹಾವನೂರ ದೊರೆ, ಲಕ್ಷ್ಮಣೇಶ್ವರದ ಖಾನಪ್ಪದೇಸಾಯಿ ಗೌಡನ ಮಗ ಕೆಂಚಣ್ಣ ಗೌಡ, ಮಹಾರಾಷ್ಟ್ರದ ಛತ್ರಪತಿ ಶಿವಾಜಿ ಮುಂತಾದವರು ಬೇರೆ ಬೇರೆ ಸ್ಥಳಗಳಲ್ಲಿ, ಬೇರೆ ಬೇರೆ ಕಾಲಗಳಲ್ಲಿ ಮುರಿಗೆ ಶಾಂತವೀರ ಸ್ವಾಮಿಗಳನ್ನು ಭೇಟಿ ಮಾಡಿ, ಅವರಿಗೆ ಗೌರವ ತೋರಿ ಆಶೀರ್ವಾದ ಪಡೆದಿದ್ದರೆಂದು ತಿಳಿದುಬರುತ್ತದೆ. ಮುರಿಗೆ ಶಾಂತವೀರರು ತಮ್ಮ ಜೀವಿತಾವಧಿಯಲ್ಲಿ ಅನೇಕ ಕೃತಿಗಳನ್ನು ರಚಿಸಿದ್ದಾರೆ. ಕನ್ನಡ, ಸಂಸ್ಕೃತ ಎರಡು ಭಾಷೆಗಳಲ್ಲೂ, ವಿಶೇಷ ಪಾಂಡಿತ್ಯವನ್ನು ಹೊಂದಿದ್ದ ಅವರು ಕ್ಲಿಷ್ಟ ಕೃತಿಯಿಂದ ಸರಳ ಕೃತಿಯವರೆಗೆ ಅನೇಕ ದೊಡ್ಡ ಮತ್ತು ಚಿಕ್ಕ ಕೃತಿಗಳನ್ನು ರಚಿಸಿದ್ದಾರೆ. ಹಮ್ಮೀರ ಕಾವ್ಯ ಅಥವಾ ರಾಜೇಂದ್ರ ವಿಜಯ ಎಂಬುದು ಒಂದು ಕ್ಲಿಷ್ಟ ಚಂಪೂಕಾವ್ಯ. ಮನುರಾಜೇಂದ್ರನ ತಾರಾವಳಿ, ಕಟ್ಟಿಗೆ ತಾರಾವಳಿ, ಪ್ರಭುಲಿಂಗ ಕಂದ, ಶಬ್ದರತ್ನಾಕರ, ವೈರಾಗ್ಯ ಷಟ್ಪದಿ, ಇವೇ ಮುಂತಾದವು ಅವರ ಕೃತಿಗಳು. ಭಾಷಾ ಪ್ರಯೋಗ ಮತ್ತು ತತ್ತ್ವದ ದೃಷ್ಟಿಯಿಂದ ಕೆಲವು ಪ್ರೌಢ ಕೃತಿಗಳೆನಿಸಿವೆ. ಶಾಂತವೀರರಿಗೆ ವಿಶೇಷಣದ ರೀತಿಯಲ್ಲಿ ಬರುವ ಮುರಿಗೆ ಎಂಬುದು ಕುತೂಹಲಕರವಾಗಿದೆ. ಇದು ಜನಮಾನಸದಲ್ಲಿ ಎಷ್ಟು ಪ್ರಭಾವಶಾಲಿಯಾಗಿ ನಿಂತಿದೆಯೆಂದರೆ, ಇವರ ನಂತರ ಬಂದ ಎಲ್ಲ ಸ್ವಾಮಿಗಳನ್ನು ‘ಮುರಿಗೆ ಸ್ವಾಮಿ'ಗಳೆಂದೆ ಕರೆಯುತ್ತ ಬರಲಾಗಿದೆ. ಹಾಗೆಯೇ ಚಿತ್ರದುರ್ಗದ ಮಠ ‘ಮುರಿಗೆ ಸ್ವಾಮಿಗಳ ಮಠ'ವಾಗಿ ಆ ಮೇಲೆ ‘ಮುರಿಗೆ ಮಠ' ಎಂದೇ ಹೆಸರಾಗಿದೆ. ಅಷ್ಟೇ ಅಲ್ಲ ಬೇರೆ ಬೇರೆ ಸ್ಥಳಗಳಲ್ಲಿ ಇರುವ ಇದರ ಶಾಖಾಮಠಗಳೂ ಸಹ ಮುರಿಗಾ ಮಠ, ಮುರುಘಾ ಮಠ ಎಂಬ ಹೆಸರಿನಲ್ಲಿಯೇ ಇಂದಿಗೂ ಗುರುತಿಸಲ್ಪಡುತ್ತಿವೆ. ಈ ಮುರಿಗೆ ಎನ್ನುವುದು ಏನು? ಎಂಬುದನ್ನು ವಿಚಾರ ಮಾಡಬೇಕಾಗಿದೆ. ಇದನ್ನು ಕುರಿತು ಬಂದಿರುವ ವಿವರಣೆಯ ರೂಪದ ಕೆಲವು ಹೇಳಿಕೆಗಳು ಹೀಗಿವೆ: ೧. ಶೂನ್ಯಪೀಠದ ಪರಂಪರೆ ಚನ್ನಬಸವಣ್ಣನವರಿಂದ ಮುಂದುವರಿದುಕೊಂಡು ಬಂತೆಂಬ ನಂಬಿಕೆಯ ಹಿನ್ನೆಲೆಯಲ್ಲಿ ಚನ್ನಬಸವಣ್ಣನವರು ಷಣ್ಮುಖನ ಅವತಾರ; ಷಣ್ಮುಖನಿಗೆ ‘ಮುರುಘ' ಎಂಬ ಹೆಸರು ಇರುವುದರಿಂದ ಇವರು ಷಣ್ಮುಖನ ಅರ್ಥಾತ್ ಮುರುಘನ ಪರಂಪರೆಯವರು; ಹಾಗಾಗಿ ‘ಮುರುಘ' ಎಂಬುದನ್ನೇ ‘ಮುರಿಗೆ' ಎಂದು ರೂಪಾಂತರ ಮಾಡಿಕೊಂಡು ಬಳಸುತ್ತಾ ಬರಲಾಗಿದೆ ಎಂಬುದು ಅಂತಹ ಹೇಳಿಕೆಗಳಲ್ಲಿ ಒಂದು. ೨. ಶಾಂತವೀರ ಸ್ವಾಮಿಗಳು ಕೈಯಲ್ಲಿ ಮುರಿಗೆಯ ಮುದ್ಗರ, ತಲೆಯಲ್ಲಿ ಮುರಿಮುರಿಯಾದ ಒಂದು ವಸ್ತç, ಎದೆ ಮತ್ತು ಬೆನ್ನಿಗೆ ಮುರಿಗೆ ಮುರಿಗೆಯಾಗಿ ಒಂದು ಶಾಲು ಇವನ್ನು ಧರಿಸಿದ್ದರು. ಆದ್ದರಿಂದ ಅವರಿಗೆ ಆ ಹೆಸರು ಬಂದಿರಬೇಕು ಎಂಬುದು ಮತ್ತೊಂದು ಹೇಳಿಕೆ. ೩. ಮುರಿಗಾ ಶಾಂತವೀರರ ಶಿಷ್ಯರೂ ಅವರ ಉತ್ತರಾಧಿಕಾರಿಯೂ ಕವಿ-ವಿದ್ವಾಂಸರೂ ಆದ ಗುರುಸಿದ್ಧ ಅಥವಾ ಇಮ್ಮಡಿ ಮುರಿಗೆ ಸ್ವಾಮಿಗಳು ಅವರ ‘ಪ್ರಭುಲೀಲಾ' ಎಂಬ ಸಂಸ್ಕೃತ ಕಾವ್ಯದ ಆರಂಭದಲ್ಲಿ ಶರೀರಸ್ಥವಾದ ಚಿತ್ತಿನಿಂದ ಇಂದ್ರಿಯಗಳ ಉಪಟಳವನ್ನು ಶಮನಗೊಳಿಸಿದ್ದರಿಂದ ಅವರು ಮುರಿಗಾ ಶಾಂತವೀರ ಎಂದಾದರು ಎಂದು ವಿವರಣೆ ಕೊಟ್ಟಿದ್ದಾರೆ. ಆದರೆ ವಿದ್ವಾಂಸರೇ ಹೇಳುವಂತೆ ಇದು ವಿದ್ವತ್ತಿನ ವಿವರಣೆಯಾಯಿತೇ ಹೊರತು ಮುರುಘ ಎಂಬ ಪದದ ವಾಸ್ತವವಾದ ವ್ಯುತ್ಪತ್ತಿ ತೇರ್ಗಡೆಯಾಗದೇ ಹಾಗೆಯೇ ಉಳಿದಿದೆ. ೪. ಮುರಿಗೆ ಎಂಬುದು ಒಂದು ಸ್ಥಳನಾಮ ಇದ್ದಿರಬೇಕು. ಅನೇಕ ಸ್ವಾಮಿಗಳನ್ನು ಅವರು ಮೊದಲಿಗೆ ಇದ್ದ ಅಥವಾ ಬಂದಿದ್ದ ಊರುಗಳ ಹೆಸರಿನಿಂದ ಕರೆದಿರುವುದು ಕಾಣುತ್ತದೆ. ಉದಾಹರಣೆಗೆ ಸ್ವಾದಿ ಚನ್ನಬಸವ ಸ್ವಾಮಿಗಳು, ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳು, ನಾಯಕನಹಟ್ಟಿ ಗುರುಪಾದ ಸ್ವಾಮಿಗಳು, ಸಾವಳಿಗೆ ಗುರುಶಾಂತ ಸ್ವಾಮಿಗಳು, ಶಿರಸಂಗಿ ಮಹಲಿಂಗ ಸ್ವಾಮಿಗಳು, ಹೆಬ್ಬಾಳು ರುದ್ರ ಸ್ವಾಮಿಗಳು, ಬ್ಯಾಡಗಿ ಮುಪ್ಪಿನ ಸ್ವಾಮಿಗಳು, ಇವರ ಹೆಸರಿನ ಆರಂಭದಲ್ಲಿ ಅವರವರ ಊರಿನ ಹೆಸರುಗಳನ್ನು ಹೇಳಿರುವಂತೆ ಶಾಂತವೀರರಿಗೂ ಕೂಡ ಅವರು ಮೊದಲಿಗೆ ಇದ್ದ ಒಂದು ಸ್ಥಳದ ಹೆಸರಾಗಿರಬಹುದಾದ ‘ಮುರಿಗೆ’ ಎಂಬುದನ್ನು ಬಳಸಿರಬೇಕು ಎಂಬ ಹೇಳಿಕೆ ಇನ್ನೊಂದು ಹೇಳಿಕೆಯಾಗಿದೆ. ಆದರೆ ಅಂತಹ ಹೆಸರಿನ ಗ್ರಾಮವೊಂದು ಇದ್ದುದಾಗಲಿ ಅಥವಾ ಹೆಸರು ಬದಲಾಗಿರುವುದಾಗಲಿ, ಹೆಸರನ್ನು ಬದಲು ಮಾಡಿಕೊಂಡಿರುವುದಾಗಲಿ ನಿರ್ದಿಷ್ಟವಾಗಿ ತಿಳಿದುಬರುವುದಿಲ್ಲ. ಇನ್ನು ಐದನೆಯದಾದ ಇನ್ನೊಂದು ಹೇಳಿಕೆಯಿದೆ: ಮುರಿಗೆ ಶಾಂತವೀರರು ನದಿಯೊಂದರ ಹತ್ತಿರ ಬಂದಾಗ ಎರಡು ಹಾವುಗಳು ಅವರ ಬಳಿಗೆ ಬಂದವೆಂದು ಅವರು ಅವುಗಳತ್ತ ಕೈಚಾಚಿದಾಗ ಅವರ ಶಕ್ತಿ ಪ್ರಭಾವದಿಂದ ಅವೆರಡು ಕಲೆತು ಒಂದು ಬೆತ್ತರೂಪ ಪಡೆದವೆಂದು ಹೀಗೆ ಮುರಿಗೆ ಮುರಿಗೆಯಾಗಿದ್ದ ಬೆತ್ತವನ್ನು ಅವರು ಯಾವಾಗಲೂ ಹಿಡಿದಿರುತ್ತಿದ್ದರಿಂದ ಅವರಿಗೆ ಆ ಹೆಸರು ಬಂದಿರಬಹುದೆಂದು ಕವಿಯೊಬ್ಬರು ವರ್ಣಿಸಿದ್ದಾರೆ. ಈ ಮೇಲಿನ ಎಲ್ಲಾ ಹೇಳಿಕೆಗಳಲ್ಲಿ ಕೊನೆಯ ಹೇಳಿಕೆಯ ಅಂಶ ಸತ್ಯಕ್ಕೆ ಹತ್ತಿರ ಇರುವಂತಿದೆ. ಅಂದರೆ ತಿರುಚಿದ ನಾಗರ ಹಾವಿನಂತಿದ್ದ ವಿಲಕ್ಷಣವಾದ ಒಂದು ‘ನಾಗಮುರಿಗೆ ಬೆತ್ತ'ವನ್ನು ಹಿಡಿದಿರುತ್ತಿದ್ದುದು ಅವರನ್ನು ಗುರುತಿಸುವ ಅಂಶವಾಗಿ ‘ಮುರಿಗೆ ಸ್ವಾಮಿಗಳು’ ಎಂಬ ಹೆಸರು ಅವರಿಗೆ ಬಂದಿರುವಂತೆ ಕಾಣುತ್ತದೆ.

ಇಮ್ಮಡಿ ಮುರಿಗೆ ಸ್ವಾಮಿಗಳು
ಮುರಿಗೆ ಶಾಂತವೀರ ದೇಶಿಕರ ಅನಂತರ ಅವರ ಉತ್ತರಾಧಿಕಾರಿಯಾಗಿ ಶೂನ್ಯಪೀಠ ಪರಂಪರೆಯಲ್ಲಿ ಪೀಠಾಧೀಶರಾಗಿ ಬಂದವರು ಗುರುಸಿದ್ಧ ಸ್ವಾಮಿಗಳು. ಇವರನ್ನು ಇಮ್ಮಡಿ ಮುರಿಗಾ ಗುರುಸಿದ್ಧ ಸ್ವಾಮಿಗಳು, ಇಮ್ಮುಡ ಮುರಿಗಾ ಸ್ವಾಮಿಗಳು ಎಂದು ಕರೆಯಲಾಗುತ್ತಿದೆ. ಮುರಿಗೆ ಶಾಂತವೀರ ದೇಶಿಕರ ತರುವಾಯದಲ್ಲಿ ಮುರಿಗೆ ಸ್ವಾಮಿಗಳಲ್ಲಿ ಎರಡನೆಯವರಾಗಿ ಇವರನ್ನು ಇಮ್ಮಡಿ ಮುರಿಗೆ ಸ್ವಾಮಿಗಳೆಂದು ಕರೆಯುವುದು ಸಮಂಜಸವಾಗಿದೆ. ಇವರನ್ನು ಇಮ್ಮಡಿ ಮುರಿಗಾ ಸ್ವಾಮಿಗಳೆಂದು ಕರೆದ ರೀತಿಯಲ್ಲಿ ಮುಂದೆ ಅನುಕ್ರಮವಾಗಿ ಬಂದವರನ್ನು ಮುಮ್ಮಡಿ ಮುರಿಗೆ ಸ್ವಾಮಿಗಳು, ನಾಲ್ವಡಿ ಮುರಿಗೆ ಸ್ವಾಮಿಗಳು ಇತ್ಯಾದಿಯಾಗಿ ಸಂಖ್ಯಾನುಕ್ರಮದಲ್ಲಿ ಕರೆದಿರು(ವ ಪದ್ಧತಿ ಕಾಣು)ವುದಿಲ್ಲ.

ಸ್ವಾದಿ ಚನ್ನಬಸವ ಸ್ವಾಮಿಗಳು
ಇಮ್ಮಡಿ ಮುರಿಗೆ ಸ್ವಾಮಿಗಳ ಅನಂತರ ಅವರ ಉತ್ತರಾಧಿಕಾರಿಯಾಗಿ ಬಂದವರೆ ಸ್ವಾದಿ ಚನ್ನಬಸವ ಸ್ವಾಮಿಗಳು. ಇವರು ಮೂಲತಃ ಸ್ವಾದಿಯಲ್ಲಿದ್ದವರಾಗಿ ಈ ಪೀಠಕ್ಕೆ ಆಯ್ಕೆಗೊಂಡುದರಿಂದ ಸ್ವಾದಿ ಚನ್ನಬಸವ ಸ್ವಾಮಿಗಳು ಎಂದು ಹೆಸರಾಗಿದ್ದಾರೆ. ಇವರು ಕ್ರಿ.ಶ. ೧೭೨೯ರಲ್ಲಿ ಇಮ್ಮಡಿ ಮುರಿಗೆ ಸ್ವಾಮಿಗಳ ಲಿಂಗೈಕ್ಯರಾದ ನಂತರದಿಂದ ನಿಖರವಾಗಿ ಎಷ್ಟು ವರ್ಷಗಳ ಕಾಲ ಪೀಠಾಧ್ಯಕ್ಷರಾಗಿದ್ದರು ಎನ್ನುವುದು ತಿಳಿದುಬಂದಿಲ್ಲ. ಒಂದನೆಯ ಮತ್ತು ಎರಡನೆಯ ಮುರಿಗೆಯ ಸ್ವಾಮಿಗಳ ಹಾಗೆ ಕನ್ನಡ, ಸಂಸ್ಕೃತಗಳೆರಡರಲ್ಲೂ ಬಲ್ಲಿದರಾಗಿದ್ದರು. ಹಾಗಾಗಿಯೇ ಇವರು ‘ವೀರಶೈವೋತ್ಕರ್ಷ ಪ್ರದೀಪಿಕಾ' ಎಂಬ ಒಂದು ಸಂಸ್ಕೃತ ಕೃತಿಯನ್ನು ರಚಿಸಿದ್ದಾರೆ. ಇದರಲ್ಲಿ ಅವರು ಪ್ರೌಢವಾದ ಸಂಸ್ಕೃತ ಗದ್ಯದಲ್ಲಿ ಶಿವತತ್ತ್ವಪರವಾದ ವಿಷಯವನ್ನು ನಿರೂಪಿಸಿರುವುದಾಗಿ ತಿಳಿಯಲಾಗಿದೆ. ಇವರು ಒಂದು ಸಲ ಸಕಲ ಪರಿವಾರ ಸಮೇತರಾಗಿ ಸಂಚಾರ ಕೈಗೊಂಡು ಹರಪನಹಳ್ಳಿಗೆ ಬಂದರು; ಅಲ್ಲೇ ಹತ್ತಿರದಲ್ಲಿದ್ದ ಗುಡ್ಡದ ಮಠದಲ್ಲಿ ಬೀಡು ಬಿಟ್ಟರು. ಅವರು ಊರನ್ನು ಪ್ರವೇಶಿಸುದಿದ್ದುದಕ್ಕೆ ಮಹಲಿಂಗೇಂದ್ರ ವಿಜಯ ಕೃತಿಯಲ್ಲಿ ಒಂದು ಕಾರಣವನ್ನು ವಿವರಿಸಲಾಗಿದೆ. ಆಗ ಹರಪನಹಳ್ಳಿಯ ರಾಜನಾಗಿದ್ದ ಸೋಮಶೇಖರ ನಾಯಕನು ಒಂದು ತಿಂಗಳ ಹಿಂದೆ ತನ್ನ ತಂದೆಯನ್ನೇ ಕೊಂದು; ಅಧಿಕಾರದ ಗದ್ದುಗೆಯನ್ನು ಏರಿದ್ದನು. ಈ ವಿಷಯವನ್ನು ಕೇಳಿದ ಸ್ವಾಮಿಗಳವರಿಗೆ ಆ ಊರನ್ನು ಪ್ರವೇಶಿಸಲು ಮನಸ್ಸಾಗಲಿಲ್ಲ. ಸ್ವಯಂ ಸೋಮಶೇಖರ ನಾಯಕನೇ ಸ್ವಾಮಿಗಳಲ್ಲಿಗೆ ಬಂದು ಕೈ ಮುಗಿದಾಗ ಸ್ವಾಮಿಗಳು ಕೆಲವೊತ್ತು ಮೌನದಲ್ಲಿದ್ದು "ಹೃದಯ ಸಂಪತ್ತನ್ನು ಕಳೆದುಕೊಂಡವನು ನೀನು. ನಿನ್ನ ಮನೆಗೆ ಬರಲು ನಮಗೆ ದಾರಿಯಿಲ್ಲ" ಎಂದರು. ಅಷ್ಟೇ ಅಲ್ಲ, ಸೋಮಶೇಖರ ನಾಯಕನು ವೀರಶೈವ ಧರ್ಮಕ್ಕೆ ಹೊರತಾದವನು ಎಂದು ಬಹಿಷ್ಕಾರ ಪತ್ರವನ್ನು ಬರೆಸಿದರು. ತದನಂತರದಲ್ಲಿ ಅವರು ಹರಪನಹಳ್ಳಿಯನ್ನು ಬಿಟ್ಟು ಹೊರಟರು. ಹಿರೇಮಾಗಡಿಯನ್ನು ತಲುಪಿ, ಅಲ್ಲೇ ಲಿಂಗೈಕ್ಯರಾದರು. ಇವರ ತರುವಾಯ ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳು ಪೀಠಾಧೀಶರಾಗಿ ಮಠವನ್ನು ಮುನ್ನಡೆಸುವ ಕರ್ತವ್ಯದಲ್ಲಿ ನಿರತರಾದರು.

ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳು
ಇವರು ಯಾವ ವರ್ಷದಿಂದ ಪೀಠಾಧೀಶರಾಗಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ ಅವರು ೧೭೫೭ರವರೆಗೆ ಪಟ್ಟದಲ್ಲಿದ್ದರು; ಇವರ ಕಾಲದಲ್ಲಿ ನಡೆದ ಒಂದು ಘಟನೆ ಹೀಗಿದೆ: ಸ್ವಾಮಿಗಳು ಒಮ್ಮೆ ಎಡೆಯೂರಿಗೆ ಹೋದಾಗ ಅಲ್ಲಿ ಗುರುಸ್ಥಲದ ಪಟ್ಟದ ಸ್ವಾಮಿಗಳೊಬ್ಬರಿಗೆ ಸುಳ್ಳು ಆರೋಪಗಳನ್ನು ಹೊರಿಸಿದುದು ಅದರಿಂದ ಅವರು ಅಶಾಂತರಾಗಿದ್ದುದು ತಿಳಿದುಬಂತು. ಆ ಆರೋಪ ಏನೆಂಬುದು ನಿಶ್ಚಿತವಿಲ್ಲ. ಆದರೆ ಸಿದ್ಧಲಿಂಗ ಸ್ವಾಮಿಗಳು ಆರೋಪ ಹೊರಿಸಲ್ಪಟ್ಟಿದ್ದ ಗುರುಸ್ಥಲದ ಸ್ವಾಮಿ ದೋಷರಹಿತರಾಗಿದ್ದರೆಂಬುದನ್ನು ಕಂಡುಕೊಂಡರು. ಅಷ್ಟೇ ಅಲ್ಲ, ಸಮಾಜಕ್ಕೂ ಕೂಡ ಅವರ ಮೇಲೆ ಬಂದಿದ್ದ ಆರೋಪ ನಿರಾಧಾರವಾದುದ್ದು ಎಂದು ಪ್ರಕಟಪಡಿಸಿದರು. ಈ ಸುದ್ಧಿಯನ್ನು ಆ ಪ್ರಾಂತ್ಯದ ರಾಣಿಯಾಗಿದ್ದ ಕೊಯಿಮತ್ತೂರ ಮಲ್ಲಮ್ಮ ಎಂಬಾಕೆ ಸ್ವಾಮಿಗಳಿಗೂ ಸಮಾಜದ ಜನಕ್ಕೂ ಚಿತ್ರದುರ್ಗದ ಸ್ವಾಮಿಗಳು ರಾಜಿ ಮಾಡಿದ್ದಕ್ಕೆ ವಿರೋಧಿಸಿದರು; ಚಿತ್ರದುರ್ಗದ ಸ್ವಾಮಿಗಳು ಗುರುಸ್ಥಲದ ಪರವಾಗಿ ಹೊರಡಿಸಿದ್ದ ಶುದ್ಧಿ ಘೋಷಣೆಯನ್ನು ಒಪ್ಪದಿರುವಂತೆ ತನ್ನ ಜನರನ್ನು ಒತ್ತಾಯಪಡಿಸಿದಾಗ ಅವರು ಅದನ್ನು ಬೆಂಬಲಿಸಲಿಲ್ಲ. ಇದೇ ಸಂದರ್ಭದಲ್ಲಿ ಸಿದ್ಧಲಿಂಗ ಸ್ವಾಮಿಗಳು ಆ ರಾಣಿಯ ವಿಷಯದಲ್ಲೂ ಬಹಿಷ್ಕಾರ ಹಾಕಿದರು. ಸ್ವಾಮಿಗಳ ಈ ಪ್ರತಿಕ್ರಿಯೆಯಿಂದ ಕೊಯಿಮತ್ತೂರು ಮಲ್ಲಮ್ಮ ಅಪ್ರತಿಭಳಾಗಿ ಸ್ವಾಮಿಗಳವರಲ್ಲಿ ಬಂದು ತನ್ನದು ತಪ್ಪಾಯಿತೆಂದು ಎರಡು ಸಾವಿರ ಹೊನ್ನನ್ನು ಪಾದಕಾಣಿಕೆಯಾಗಿ ಒಪ್ಪಿಸಿ ತನಗೆ ಶಿವತತ್ತ್ವೋಪದೇಶ ಮಾಡಬೇಕೆಂದು ಕೇಳಿಕೊಂಡಳು. ಆ ಮೇಲೆ ಸ್ವಾಮಿಗಳು ವಾತ್ಸಲ್ಯದಿಂದ ಅವಳ ಅರಮನೆಗೆ ಭೇಟಿಯಿತ್ತು ಅವಳಿಗೆ ಉಪದೇಶ ನೀಡಿ ಆಶೀರ್ವಾದ ಮಾಡಿದರು. ಹೀಗೆ ಸ್ವಾಮಿಗಳು ಸರಿಯಿಲ್ಲದ್ದನ್ನು ಖಂಡಿಸುತ್ತಾ, ಸರಿಯಿದ್ದುದನ್ನು ಬೆಂಬಲಿಸುತ್ತಾ ದಿಟ್ಟತೆಯಿಂದ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರು. ಮುಂದೆ ಅವರು ಕೊಡಗು ಪ್ರಾಂತದ ಚಂಗಡಹಳ್ಳಿಗೆ ಬಂದು ಅಲ್ಲಿ ಕೆಲಕಾಲ ಇದ್ದು, ಅಲ್ಲೇ ಲಿಂಗದೊಳಗಾದರು. ಇವರ ತರುವಾಯ ಪೀಠಾಧ್ಯಕ್ಷರಾದವರು ನಾಯಕನಹಟ್ಟಿ (ದೊಡ್ಡ)ಗುರುಪಾದಸ್ವಾಮಿಗಳು ಇವರು ಮೊದಲಿಗೆ ಶಾಖಾಮಠದ ಅಧಿಪತಿಗಳಾಗಿ ನಾಯಕನಹಟ್ಟಿಯಲ್ಲಿ ಇದ್ದುದರಿಂದಲೋ ಅಥವಾ ನಾಯಕನಹಟ್ಟಿಯೇ ಇವರ ಸ್ವಂತ ಊರಾಗಿದ್ದರಿಂದಲೋ ಇವರನ್ನು ಹಾಗೆ ಕರೆಯಲಾಗಿದೆ. ಈ ಪೀಠಾಧೀಶರಲ್ಲಿ ಮುಂದೆ ಇವರಾದ ಮೇಲೆ ಇದೇ ಹೆಸರಿನ ಇನ್ನೊಬ್ಬರು ಪೀಠಾಧೀಶರಾಗಿ ಬರುವುದರಿಂದ, ನಾಯಕನಹಟ್ಟಿ ಗುರುಪಾದ ಸ್ವಾಮಿಗಳನ್ನು, ದೊಡ್ಡ ಗುರುಪಾದ ಸ್ವಾಮಿಗಳೆಂದು ಇವರಾದ ಮೇಲೆ ಬರುವವರನ್ನು ಸಣ್ಣ ಗುರುಪಾದ ಸ್ವಾಮಿಗಳೆಂದು ದಾಖಲೆಗಳಲ್ಲಿ ಕರೆಯಲಾಗಿದೆ.

ನಾಯಕನಹಟ್ಟಿ ಗುರುಪಾದ ಸ್ವಾಮಿಗಳು
ಇವರು ಶಿರಹಟ್ಟಿ ಸಿದ್ಧಲಿಂಗ ಸ್ವಾಮಿಗಳಿರುವಾಗಲೇ ೧೭೪೫ರಲ್ಲಿಯೇ ಅವರ ಉತ್ತರಾಧಿಕಾರಿಗಳೆಂದು ಆಯ್ಕೆಗೊಂಡಿದ್ದರು. ೧೭೫೭ರಲ್ಲಿ ಶಿರಹಟ್ಟಿ ಸಿದ್ಧಲಿಂಗಸ್ವಾಮಿಗಳು ಲಿಂಗೈಕ್ಯರಾದ ಮೇಲೆ ಇವರು ಪೀಠಾಧೀಶರಾಗಿ ಮಠದ ಧರ್ಮ ಕರ್ತವ್ಯಗಳನ್ನು ನಿರ್ವಹಿಸತೊಡಗಿದರು. ಮುಂದೆ ಇವರು ಯಾವ ವರ್ಷದವರೆಗೆ ಪೀಠಾಧ್ಯಕ್ಷರಾಗಿದ್ದರು ಎಂಬುದು ತಿಳಿದುಬಂದಿಲ್ಲ. ಇವರ ಕಾಲದಲ್ಲಿ ಚಿತ್ರದುರ್ಗದ ಅರಮನೆ ಮತ್ತು ಗುರುಮನೆಗಳ ಸಂಬಂಧ ಬಿಗಡಾಯಿಸುವಂತಹ ಘಟನೆಯೊಂದು ಜರುಗಿತು. ಕೋಗುಂಡೆ(ಕೊಂಗುಂಟೆ) ಎಂಬುದು ಚಿತ್ರದುರ್ಗದ ಹತ್ತಿರದ ಒಂದು ಗ್ರಾಮ. ಅಲ್ಲಿ ಅಸ್ಪೃಶ್ಯ ಜಾತಿಯ ಹೆಣ್ಣೊಬ್ಬಳು (ಇವಳ ಹೆಸರು ಗೂಳಿ ಎಂದು ದಾಖಲೆಗಳಲ್ಲಿ ಹೇಳಿದೆ) ಕೆಲವು ಲಿಂಗಾಯತ ಯುವಕರು ಸಂಪರ್ಕ ಬಯಸಿದಾಗ ಅವಳು ಅವರು ಧರಿಸಿಕೊಂಡಿದ್ದ ಲಿಂಗಗಳನ್ನೇ ಬಿಚ್ಚಿಸಿ ತನ್ನ ಬಳಿ ಇರಿಸಿಕೊಂಡಳು. ಈ ವಿಷಯ ಗುರುಪಾದಸ್ವಾಮಿಗಳವರಿಗೆ ಆ ಊರಿನ ವೃದ್ಧರ ಮೂಲಕ ತಿಳಿಯಿತು. ಆಗ ಸ್ವಾಮಿಗಳು ಆ ಯುವಕರಿಗೆ ಬಹಿಷ್ಕಾರ ಹಾಕಿದರು. ಈ ಬಹಿಷ್ಕಾರದಿಂದ ಅಸಮಾಧಾನಗೊಂಡ ಯುವಕರು ಚಿತ್ರದುರ್ಗದ ದೊರೆಯಾಗಿದ್ದ ಕೊನೆಯ ಮೆದಕೇರಿನಾಯಕನ ಬಳಿ ಹೋಗಿ, ಅವನಲ್ಲಿ ದೂರಿದರು; ದೊರೆ ಅವರ ಮಾತುಗಳನ್ನು ಕೇಳಿ ಸ್ವಾಮಿಗಳಲ್ಲಿಗೆ ಬಂದು ಅವರ ಮೇಲಿನ ಬಹಿಷ್ಕಾರವನ್ನು ಹಿಂತೆಗೆದುಕೊಳ್ಳಬೇಕೆಂದು ಕೇಳಿದನು; ನೀತಿರಹಿತರಾಗಿ ನಡೆದುಕೊಂಡ ಆ ಯುವಕರಿಗೆ ತಾವು ಮಾಡಿದ್ದು ಸರಿಯೆಂದು ಸ್ವಾಮಿಗಳು ಸಮರ್ಥಿಸಿಕೊಂಡರು. ದೊರೆಯು ಸೈರಣೆಯನ್ನು ಕಳೆದುಕೊಂಡು ಸ್ವಾಮಿಗಳಲ್ಲಿ ಅವಿಧೇಯತೆಯ ಮಾತುಗಳನ್ನಾಡಿದನು. ಸ್ವಾಮಿಗಳು ಇನ್ನು ಈ ದೊರೆಯ ಊರಿನಲ್ಲಿರುವುದು ಬೇಡವೆಂದು ತಮ್ಮ ಶಿಷ್ಯ ಮತ್ತು ಭಕ್ತ ಪರಿವಾರದೊಂದಿಗೆ ಚಿತ್ರದುರ್ಗವನ್ನು ಬಿಟ್ಟು ಹೊರಟರು. ಚಿತ್ರದುರ್ಗದ ಬೃಹನ್ಮಠದ ಸಮೀಪದಲ್ಲಿ ಉತ್ತರದಲ್ಲಿರುವ ಬೆಟ್ಟದ ಒಂದು ಬುಡದಲ್ಲಿ ಅವರು ತಮ್ಮ ಶಿಷ್ಯ ವರ್ಗದೊಂದಿಗೆ ಸ್ವಲ್ಪ ಕಾಲ ತಂಗಿ ಪ್ರಯಾಣವನ್ನು ಮುಂದುವರೆಸಿದರೆಂದು ಕಾಣುತ್ತದೆ. ಅಲ್ಲಿಯ ದೊಡ್ಡ ಬಂಡೆಯ ಕೆಳಗೆ ಈಗಲೂ ಬಾಗಿಲು ಇರುವ, ಅದರ ಮುಂದೆ ಹಿಂದೆ ಒಂದು ಕಟ್ಟಡವಿದ್ದ, ಜಾಗವನ್ನು ಗುರುಪಾದ ಸ್ವಾಮಿಗಳ ಮಠ ಎಂದು ಈಗಲೂ ಕರೆಯುತ್ತಾರೆ. ಸ್ವಾಮಿಗಳು ಅಲ್ಲಿಂದ ಮುಂದೆ ಹಾವನೂರಿಗೆ ಪ್ರಯಾಣ ಬೆಳೆಸಿದರು. ಅದರ ಪ್ರಭುವಾಗಿದ್ದ ಹನುಮಗೌಡ ಅಥವಾ ಹನುಮಂತಗೌಡನು ಸ್ವಾಮಿಗಳನ್ನು ತನ್ನ ಅರಮನೆಗೆ ಬಿಜೆಯ ಮಾಡಿಸಿಕೊಂಡು ಹೋಗಿ ಅವರನ್ನು ವಿಶೇಷವಾಗಿ ಸತ್ಕರಿಸಿದನು. ಕೆಲಕಾಲ ಅಲ್ಲಿದ್ದು ಸ್ವಾಮಿಗಳು ಮುಂದೆ ಉತ್ತರಕ್ಕೆ ತೆರಳಿ ಗುಣಮೆಟ್ಟುಕಲ್ಲು ಎಂಬ ಸ್ಥಳಕ್ಕೆ ಬಂದರು. (ಈ ಸ್ಥಳನಾಮದ ಮೂಲರೂಪ ಗುಂಡಮೆಟ್ಟುಕಲ್ಲು ಎಂದು ಇದ್ದುದಾಗಿ ಹಸ್ತಪ್ರತಿಯ ಒಂದು ಉಲ್ಲೇಖದಿಂದ ತಿಳಿಯುತ್ತದೆ). ಪ್ರಾಕೃತಿಕ ಪರಿಸರದ ವೈಶಿಷ್ಟ್ಯ ಮತ್ತು ವೈಲಕ್ಷಣ್ಯಗಳಿಂದ ಕೆಲವು ಸ್ಥಳನಾಮಗಳು ಬರುವುದುಂಟು. ಇದು ಹಾಗೆ ಬಂದಿರಬಹುದು. ಇದನ್ನು ಈಗ ಗುರುಮಠಕಲ್(ಆಡುಮಾತಿನಲ್ಲಿ ಗುರುಮಿಠಕಲ್) ಎಂದು ಕರೆಯುತ್ತಾರೆ. ಇದು ಈಗಿನ ಯಾದಗಿರಿ ಜಿಲ್ಲೆಯ, ಕಸಬ ತಾಲ್ಲೂಕಿನಲ್ಲಿರುವ ಗ್ರಾಮ. ಈಗಲೂ ಅಲ್ಲಿಯ ಶಾಖಾಮಠದಲ್ಲಿ ಈ ಸ್ವಾಮಿಗಳವರ ಗದ್ದುಗೆಯಿದೆ. ಇದರಿಂದ ಈ ಸ್ವಾಮಿಗಳು ತಮ್ಮ ಕಡೆಯ ದಿನಗಳನ್ನು ಇಲ್ಲಿಯೇ ಕಳೆದರು ಎಂಬುದು ಸ್ಪಷ್ಟವಾಗುತ್ತದೆ. ಇತ್ತಕಡೆ ಸ್ವಾಮಿಗಳಿಲ್ಲದೆ ಬರಿದಾಗಿದ್ದ ಮಠದ ಜವಾಬ್ದಾರಿಯನ್ನು ಗುರುಪಾದ ಸ್ವಾಮಿಗಳೆಂಬ ಅದೇ ಹೆಸರಿನ ಇನ್ನೊಬ್ಬ ಗುರುಗಳು ವಹಿಸಿಕೊಂಡರು.

ಮೂರು ಸಾವಿರದ ಗುರುಪಾದ ಸ್ವಾಮಿಗಳು
ಇವರನ್ನು ಮೂರು ಸಾವಿರದ ಗುರುಪಾದ ಸ್ವಾಮಿಗಳೆಂದೂ ಹಿಂದೆ ಹೇಳಿದ ಹಾಗೆ ಸಣ್ಣ ಗುರುಪಾದ ಸ್ವಾಮಿಗಳೆಂದೂ ಕರೆಯಲಾಗಿದೆ. ಇವರು ಯಾವ ವರ್ಷದಲ್ಲಿ ಪಟ್ಟಾಧಿಕಾರ ವಹಿಸಿಕೊಂಡರು ಎಂಬುದು ತಿಳಿಯದು. ಆದರೆ ಚಿತ್ರದುರ್ಗ ೧೭೭೯ರಲ್ಲಿ ಪತನವಾದ ಕಾಲದಲ್ಲೇ ಇವರು ಲಿಂಗೈಕ್ಯರಾದರು ಎಂಬ ಅಂಶ ತಿಳಿದುಬರುತ್ತದೆ. ಇವರು ಮೂರು ಸಾವಿರದ ಬುಡಕಟ್ಟಿಗೆ ಸೇರಿದವರಿರಬೇಕು. ಹಾಗಾಗಿ ಅದನ್ನು ವಿಶೇಷಣದ ರೀತಿಯಲ್ಲಿ ಹೇಳಲಾಗಿದೆ. ಇವರ ಹಿಂದೆ ಇದ್ದ ದೊಡ್ಡ ಗುರುಪಾದ ಸ್ವಾಮಿಗಳೊಂದಿಗೆ ಚಿತ್ರದುರ್ಗದ ದೊರೆ ವಿರಸ ಮಾಡಿಕೊಂಡ ಹಿನ್ನೆಲೆಯಲ್ಲಿ ಇವರು ಮಠವನ್ನು ನಡೆಸಿಕೊಂಡು ಹೋಗುವ ಸನ್ನಿವೇಶ ಒದಗಿತ್ತು. ಮುಂದೆ ಶ್ರೀರಂಗಪಟ್ಟಣದ ಹೈದರಾಲಿ ದೊಡ್ಡ ಸೈನ್ಯದೊಂದಿಗೆ ಬಂದು ಚಿತ್ರದುರ್ಗವನ್ನು ಮುತ್ತಿದಾಗ ಎಷ್ಟೋ ದಿನಗಳವರೆಗೆ ಚಿತ್ರದುರ್ಗ ವಶವಾಗದಿರುವಾಗ ಮಠವನ್ನು ಸೂರೆ ಮಾಡಲು ಅಲ್ಲಿಗೆ ಸೈನ್ಯ ಸಮೇತ ನುಗ್ಗಿ ಬಂದನೆಂತಲೂ, ಮಹಾದ್ವಾರವನ್ನು ದಾಟಿ ಕರ್ತೃಗದ್ದುಗೆ ಮುಂದೆ ಬರುತ್ತಿದ್ದಂತೆ ಕಣ್ಣಿಗೆ ಕತ್ತಲಾವರಿಸಿ ಕೈಕಾಲು ಕುಸಿಯುವಂತಾಯಿತೆಂದೂ, ಇದರಿಂದ ಅಂಜಿದ ಅವನು ಮಠದಿಂದ ಹೊರಬಿದ್ದು ಓಡಿಹೋದನೆಂದು ಹೇಳಿಕೆಯಿದೆ. ೧೭೭೯ರ ಫೆಬ್ರವರಿ-ಮಾರ್ಚ್ ಅವಧಿಯಲ್ಲಿ ಚಿತ್ರದುರ್ಗವು ಹೈದರ್‌ನಿಗೆ ವಶವಾದ ಮೇಲೆ ಹೈದರ್ ಬೃಹನ್ಮಠಕ್ಕೆ ಮತ್ತೊಮ್ಮೆ ನುಗ್ಗಿ ಬಂದು ಲೂಟಿ ಮಾಡಿದನೆಂದು ಆ ಸಂದರ್ಭದಲ್ಲಿ ಸ್ವಾಮಿಗಳು ಅವರಿಗಾದ ವೇದನೆಯಿಂದ ಶಿವಯೋಗದ ಮೂಲಕ ದೇಹವನ್ನು ಬಿಟ್ಟರೆಂದು ಆಕರಗಳಿಂದ ತಿಳಿಯುತ್ತದೆ. ಹೈದರಾಲಿಯು ಮಠದ ಮೇಲೆ ಆಕ್ರಮಣ ಮಾಡಿದ್ದನೆಂಬುದಕ್ಕೆ ಮುಂದೆ ಆ ಪೀಠಾಧೀಶರಲ್ಲೊಬ್ಬರಾಗಿ ಬಂದ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳು, ಮಠದೊಳಗೆ ನುಗ್ಗಲು ಹೈದರಾಲಿಯು ಮಠದ ಪ್ರಾಕಾರದ ಗೋಡೆಗಳನ್ನು ಒಡೆಸಿದ್ದವನ್ನು ಕಟ್ಟಿಸಲು ಯತ್ನಿಸಿದರು ಎಂಬುದು ಸಾಕ್ಷಿಯಾಗಿದೆ. ಇದಲ್ಲದೆ ಕ್ರಿ.ಶ. ೧೮೪೮ರಲ್ಲಿ ಜಗಲೂರಿನ ಗ್ರಾಮಸ್ಥರು ಬೃಹನ್ಮಠಕ್ಕೆ ಬರೆದ ಪತ್ರವೊಂದು ಕ್ರಿ.ಶ. ೧೭೭೯ರಲ್ಲಿ ಚಿತ್ರದುರ್ಗ ಸಂಸ್ಥಾನದ ಮೇಲೆ ಹೈದರಾಲಿ ನಡೆಸಿದ ದಾಳಿಯ ಪರಿಣಾಮ ಬೃಹನ್ಮಠದ ಶಾಖಾಮಠಗಳ ಮೇಲೂ ಆಯಿತೆಂಬುದನ್ನು ತಿಳಿಸುತ್ತದೆ. ಹೈದರಾಲಿಯಿಂದ ಚಿತ್ರದುರ್ಗ ಪತನವಾಗುತ್ತಿದ್ದಂತೆ ಜಗಳೂರಿನಿಂದ ವಿರಕ್ತಮಠದ ಸ್ವಾಮಿಗಳು ಮಠ ತೊರೆದು ಎಲ್ಲಿಗೋ ಹೋದರೆಂಬ ವಿಷಯ ಆ ಪತ್ರದಲ್ಲಿ ಬರುತ್ತದೆ. ಆ ಮಠಕ್ಕೆ ಹಿಂದೆ ಚಿತ್ರದುರ್ಗದ ದೊರೆಗಳ ಕಡೆಯಿಂದ ನೀಡಲ್ಪಟ್ಟ ಜಗಲೂರಿಗೆ ಸಮೀಪದ ರೆಡ್ಡಿಹಳ್ಳಿಯ ಭೂಮಿಯ ಉಸ್ತುವಾರಿಯಿಲ್ಲದೆ ಅನಾಥವಾಯಿತೆಂದು ತಾತ್ಕಾಲಿಕವಾಗಿ ಅದನ್ನು ನೋಡಿಕೊಳ್ಳಲು ಬಂದ ಸುಳ್ಳೋಬನಹಳ್ಳಿಯ ನಂಜೋಬಯ್ಯನೆಂಬುವನು ಅದರ ದುರ್ಲಾಭ ಪಡೆಯಲು ಯತ್ನಿಸಿದನೆಂದು ಆದ್ದರಿಂದ ತಾವು ಮಠದ ಭೂಮಿಯನ್ನು ಮತ್ತೆ ಪಡೆಯಬೇಕೆಂದು ಆ ಮಠಕ್ಕೆ ಸೂಕ್ತರಾದ ಮರಿಯೊಬ್ಬರನ್ನು ನೇಮಕ ಮಾಡಬೇಕೆಂದು ಆ ಪತ್ರದಲ್ಲಿ ಭಕ್ತರು ಮನವಿ ಮಾಡಿಕೊಂಡಿದ್ದಾರೆ. ಮೇಲೆ ಹೇಳಿದ ಮೂರು ಸಾವಿರದ ಗುರುಪಾದ ಸ್ವಾಮಿಗಳವರ ಗದ್ದುಗೆ ಈಗಲೂ ಮಠದ ಹೊರ ಆವರಣದಲ್ಲಿದೆ. ಬಸವಕಲ್ಯಾಣದ ಗುರುಮಲ್ಲಮರಿ ಎಂಬುವರು ಈ ಗದ್ದುಗೆಗೆ ೧೮೫೧ರ ಆಗಸ್ಟ್ ೧೭ರಂದು ಒಪ್ಪಿಸಿದ ಒಂದು ಗಂಟೆ ಈಗಲೂ ಅಲ್ಲಿದೆ. ಈ ಗುರುಪಾದ ಸ್ವಾಮಿಗಳ ಗದ್ದುಗೆಯ ಕಂಬಗಳು, ಬಾಗಿಲ ಚೌಕಟ್ಟು, ಎಲ್ಲವೂ ಪಾಳೆಯಗಾರರ ಕಾಲದ ವಾಸ್ತುಶಿಲ್ಪದ ರೀತಿಯಲ್ಲಿವೆ. ಇವರ ತರುವಾಯ ಇವರ ಉತ್ತರಾಧಿಕಾರಿಯಾಗಿ ಬಂದವರು ಮೂರು ಸಾವಿರದ ಸಿದ್ಧಲಿಂಗ ಸ್ವಾಮಿಗಳು. ಹೆಸರೇ ಹೇಳುವಂತೆ ಇವರು ಮೂರು ಸಾವಿರದ ಬುಡಕಟ್ಟಿನವರು ಎಂಬುದು ಸ್ಪಷ್ಟವಾಗಿದೆ.

ಮೂರು ಸಾವಿರದ ಸಿದ್ಧಲಿಂಗ ಸ್ವಾಮಿಗಳು
ಮೂರು ಸಾವಿರದ ಸಿದ್ಧಲಿಂಗ ಸ್ವಾಮಿಗಳು ಕ್ರಿ.ಶ. ೧೭೭೯ರಿಂದ ಎಷ್ಟು ವರ್ಷವರೆಗೆ ಪೀಠಾಧ್ಯಕ್ಷರಾಗಿದ್ದರು ಎಂಬುದು ತಿಳಿಯದು. ಇವರ ಕಾಲಕ್ಕೆ ಮಠದ ಕಡೆಯಿಂದ ನಡೆದ ವಿಶೇಷ ಚಟುವಟಿಕೆಗಳಾಗಲಿ, ಘಟನೆಗಳಾಗಲಿ ಯಾವುವೂ ತಿಳಿದುಬಂದಿಲ್ಲ. ಇವರ ಕಾಲಕ್ಕೆ ಭಕ್ತರು ಜಂಗಮರು ಎಂಬ ತಾರತಮ್ಯ ಲಿಂಗಾಯತ ಸಮಾಜದೊಳಗೆ ಅಶಾಂತಿಯನ್ನು ಸೃಷ್ಟಿಸಿತ್ತು. ಸಣ್ಣ ಬರಹದ ಅಯ್ಯನವರು, ತಡಾಕಿ ಮಠದ ರುದ್ರಪ್ಪ, ಶಾಂತವೀರಪ್ಪ, ರಾಣೆಬೆನ್ನೂರಿನ ಶೆಟ್ರುದೈವ ಜೋಳದವರಿಗೂ ಆನೆಯವರಿಗೂ ಪರಸ್ಪರ ವ್ಯಾಜ್ಯ ಹುಟ್ಟಿತ್ತು. ಇವರುಗಳು ಮಹಾಸ್ವಾಮಿಗಳಿಗೂ ವಿರೋಧಿ ವರ್ತನೆ ತೋರಿದ್ದರಿಂದ ಇವರಿಗೆ ಬಹಿಷ್ಕಾರ ಜಾರಿಯಾಗಬೇಕಾಯಿತು. ಆ ಮೇಲೆ ಇವರುಗಳಿಗೆ ಒಳ್ಳೆಯ ಬುದ್ಧಿಯು ಹುಟ್ಟಿ ತಮ್ಮ ತಮ್ಮಲ್ಲಿಯೇ ವಿಚಾರ ವಿನಿಮಯ ಮಾಡಿಕೊಂಡು ಮಹಾಸ್ವಾಮಿಗಳವರನ್ನು ಕಂಡು ತಮ್ಮ ಶಕ್ತ್ಯನುಸಾರ ಅಪರಾಧ(ದಂಡ) ಸಲ್ಲಿಸಿ ಮಹಾಸ್ವಾಮಿಗಳವರ ಆಶೀರ್ವಾದವನ್ನು ಪಡೆದುಕೊಂಡರು. ಸುಂಟರಗಾಳಿ ಅಲ್ಲಿಗೆ ತಣ್ಣಗಾಯಿತು. ಸ್ವಾಮಿಗಳು ಕೆಲವು ಕಾಲದ ತರುವಾಯ ತಮ್ಮ ಸಕಲ ಪರಿವಾರದೊಂದಿಗೆ ರಾಣೆಬೆನ್ನೂರಿಗೆ ಚಿತ್ತೈಸಿದರು. ಆಗ ರಟ್ಟಿಹಳ್ಳಿಯಲ್ಲಿರುವ ಪಟ್ಟದಪ್ಪ ಜಕಿಣಿ ಕುಂಭ, ಪತಾಕಿಗಳನ್ನು ಪೂಜಿಸುವುದಾಗಿ ಅಲ್ಲಿಯ ಗ್ರಾಮಸ್ಥರು, ಸ್ವಾಮಿಗಳಿಗೆ ಅರಿಕೆ ಮಾಡಿಕೊಂಡರು. ಆಗ ಸ್ವಾಮಿಗಳು ಪಟ್ಟದಪ್ಪನಿಗೂ ಸಹ ಬಹಿಷ್ಕಾರವನ್ನು ಜಾರಿ ಮಾಡಿದರು. ಆಗ ಪಟ್ಟದಪ್ಪನು ಸ್ವಾಮಿಗಳವರಲ್ಲಿಗೆ ಬಂದು ನನ್ನಿಂದ ತಪ್ಪಾಯಿತು. ಇನ್ನು ಮುಂದೆ ತಮ್ಮ ಅಪ್ಪಣೆಯ ಪ್ರಕಾರವಾಗಿ ನಡೆದುಕೊಳ್ಳುತ್ತೇನೆ ಎಂದು ಹೇಳಿಕೊಂಡಿದ್ದರಿಂದ ಅವನಿಂದ ಅಪರಾಧ(ದಂಡ)ವನ್ನು ತೆಗೆದುಕೊಂಡು ಆತನಿಗೆ ಬುದ್ಧಿಮಾತುಗಳನ್ನು ಹೇಳಿದರು. ಅಲ್ಲಿಂದ ಮುಂದೆ ಸ್ವಾಮಿಗಳು ಸೊರಬ ಪ್ರದೇಶದ ಮಾಗಡಿಗೆ ದಯಮಾಡಿಸಿ ಕೆಲವು ದಿನ ಮಠದಲ್ಲಿಯೇ ತಂಗಿದ್ದರು. ಹೀಗೆ ಇರುತ್ತಾ ಅವರು ಒಂದು ದಿನ ಅಲ್ಲೇ ಲಿಂಗೈಕ್ಯರಾದರು. ಅವರ ಗದ್ದುಗೆ ಹಿರೇಮಾಗಡಿಯ ಮಠದಲ್ಲಿ ಈಗಲೂ ಇದೆ. ಸದಾನಂದ ಶಿವಯೋಗಿ ಎಂಬ ಯತಿಯೊಬ್ಬ ಮೂರು ಸಾವಿರದ ಸಿದ್ಧಲಿಂಗ ಶಿವಯೋಗಿಗಳ ಶಿಷ್ಯ. ಇವನು ‘ವೀರ ಮಹೇಶ್ವರಾಚಾರ ಸಾರೋದ್ಧಾರ' ಎಂಬ ಕೃತಿಗೆ ಟೀಕೆಯನ್ನು ಬರೆದಿರುವುದಾಗಿ ತಿಳಿಯುತ್ತದೆ. ಸ್ವಾಮಿಗಳು ಯಾವ ವರ್ಷದಲ್ಲಿ ಲಿಂಗೈಕ್ಯರಾದರು ಎಂಬುದು ತಿಳಿಯದು. ಮುಂದೆ ಇವರ ಉತ್ತರಾಧಿಕಾರಿಯಾಗಿ ಒಪ್ಪೊತ್ತಿನ ಚನ್ನವೀರ ಸ್ವಾಮಿಗಳು ಪೀಠಾಧ್ಯಕ್ಷರಾದರು.

ಒಪ್ಪೊತ್ತಿನ ಚನ್ನವೀರ ಸ್ವಾಮಿಗಳು
ಇವರು ಯಾವ ವರ್ಷದಲ್ಲಿ ಪೀಠಾಧ್ಯಕ್ಷರಾದರು ಎಂಬುದು ತಿಳಿಯದು. ಇವರು ಒಪ್ಪೊತ್ತಿನ ಬುಡಕಟ್ಟಿಗೆ ಸೇರಿದವರೆಂದು ಇವರ ಹೆಸರಿನ ಮೇಲಿನಿಂದ ತಿಳಿಯುತ್ತದೆ. ಪಟ್ಟಾಂತರ ವಿವರಗಳು ಕೊಡುವ ಮಾಹಿತಿಯನ್ನು ನೋಡಿದರೆ ಇವರು ಬಹಳ ಕಾಲ ಪೀಠಾಧೀಶರಾಗಿ ಇರಲಿಲ್ಲ ಮತ್ತು ಪಟ್ಟವಾದ ಹದಿನೇಳನೆ ದಿನಕ್ಕೆ ಇವರು ಲಿಂಗೈಕ್ಯರಾದರು ಎಂಬ ಆಂಶ ತಿಳಿದುಬರುತ್ತದೆ. ಸ್ವಾಮಿಗಳು ಪರಮ ವಿರಕ್ತರಾಗಿದ್ದುದರಿಂದ ಮತ್ತು ಅಧ್ಯಾತ್ಮವಾದಿಗಳಾಗಿದ್ದುದರಿಂದ ಮಠದ ಮತ್ತು ಜಗದ್ಗುರುಗಳಾಗಿದ್ದವರು ನಡೆಯಬೇಕಾದ ರೀತಿ ರಿವಾಜುಗಳು, ಬಳಸಿಕೊಳ್ಳಲೇಬೇಕಾಗಿದ್ದ ವಸ್ತುಪರಿಕರಗಳು ಅವರ ಅಧ್ಯಾತ್ಮ ಮಾರ್ಗಕ್ಕೆ ಸರಿಯೆಂದು ಕಾಣದೇ ಹೋದುವು. ಒಟ್ಟಾರೆಯಾಗಿ ಇದೆಲ್ಲವೂ ಆಡಂಬರ ಎನಿಸಿತು. ಅವರು ಮಠದಿಂದ ಹೊರಟು ಈಗ ಹಾನಗಲ್ಲು ತಾಲ್ಲೂಕಿನ ತಿಳುವಳ್ಳಿ ಎಂಬ ಊರಿಗೆ ಬಂದು ಅಲ್ಲಿಯೇ ಬಯಲಾದರು. ಅಲ್ಲಿಯೇ ಅವರ ಗದ್ದುಗೆ ಆಯಿತು. ಇಡಿಯ ಈ ಮಠಾಧೀಶರ ಪರಂಪರೆಯಲ್ಲಿಯೇ ಈ ಸ್ವಾಮಿತ್ವ ಅಥವಾ ಜಗದ್ಗುರುತ್ವ ಅಧ್ಯಾತ್ಮ ಸಾಧನೆಗೆ ತೊಡಕಾಗುತ್ತವೆಂದು ಭಾವಿಸಿದ ಇನ್ನೊಬ್ಬರಾರೂ ಸಿಗುವುದಿಲ್ಲ. ಹೀಗಾಗಿ ಇವರ ನಿಲುವು ನಡೆಗಳಿಗೆ ವಿಶೇಷವಾದ ಮಹತ್ತ್ವ ಕಾಣುತ್ತದೆ. ಮುಂದೆ ಇವರ ಉತ್ತರಾಧಿಕಾರಿಯಾಗಿ ವ್ಯಾಕರಣ ಸಿದ್ಧಲಿಂಗ ಸ್ವಾಮಿಗಳು ಪೀಠಾಧ್ಯಕ್ಷರಾಗಿ ಬಂದರು.

್ಯಾಕರಣದ ಸಿದ್ಧಲಿಂಗ ಸ್ವಾಮಿಗಳು
ಇವರು ಯಾವ ವರ್ಷದಿಂದ ಯಾವ ವರ್ಷದವರೆಗೆ, ಎಷ್ಟು ವರ್ಷ ಪೀಠಾಧ್ಯಕ್ಷರಾಗಿದ್ದರು ಎಂಬುದು ತಿಳಿಯದು. ಇವರ ಹೆಸರ ಮೇಲಿನಿಂದ ಇವರು ವ್ಯಾಕರಣದ ಬುಡಕಟ್ಟಿಗೆ ಸೇರಿದವರೆಂಬುದು ವ್ಯಕ್ತಪಡುತ್ತದೆ. ಇವರು ಪ್ರಾಚೀನ ಕಾಲದಿಂದಲೂ ವಿದ್ಯಾನಗರಿ ಎಂದು ಹೆಸರಾದ ಕಾಶಿಯಲ್ಲಿ ತರ್ಕ, ವ್ಯಾಕರಣ, ಮಿಮಾಂಸೆ, ಇವೆ ಮುಂತಾದ ಷಟ್‌ಶಾಸ್ತ್ರಗಳಲ್ಲಿ ಪರಿಣತಿಯನ್ನು ಪಡೆದರು. ಹೀಗೆ ಅವರು ಸಂಸ್ಕೃತ, ಕನ್ನಡಗಳೆರಡರಲ್ಲೂ ಪಾಂಡಿತ್ಯವನ್ನು ಪಡೆದಿರಬೇಕು. ಇವರು ವಾದದಲ್ಲಿ ಕೆಲವರನ್ನು ಸೋಲಿಸಿದರು. ದೇಶ ಸಂಚಾರವನ್ನು ಕೈಗೊಂಡು ಶಿವಭಕ್ತ ಸಮೂಹಕ್ಕೆ ಧರ್ಮೋಪದೇಶವನ್ನು ಮಾಡುತ್ತ ಮಾಗಡಿ ಗ್ರಾಮಕ್ಕೆ ಬಂದು ಅಲ್ಲಿ ಬಯಲಾದರು. ಇವರ ಗದ್ದುಗೆ ಈಗಲೂ ಅಲ್ಲಿರುತ್ತದೆ. ಇವರು ಯಾವುದಾದರೂ ತತ್ತ್ವದ, ಶಾಸ್ತ್ರ, ಸಾಹಿತ್ಯ ಕೃತಿಗಳೇನನ್ನಾದರೂ ಬರೆದಿದ್ದರೋ, ಹೇಗೋ ತಿಳಿಯದು. ಇವರು ಲಿಂಗೈಕ್ಯರಾದ ಮೇಲೆ ಇವರ ಉತ್ತರಾಧಿಕಾರಿಯಾಗಿ ಬಂದವರು ನೈಘಂಟಿನ ಸಿದ್ಧಬಸವ ಸ್ವಾಮಿಗಳು. ಇವರು ನೈಘಂಟಿನ ಬುಡಕಟ್ಟಿಗೆ ಸೇರಿದವರೆಂಬುದು ಸ್ಪಷ್ಟವಾಗಿದೆ.

ನೈಘಂಟಿನ ಸಿದ್ಧಬಸವ ಸ್ವಾಮಿಗಳು
ಇವರು ಯಾವ ವರ್ಷದಲ್ಲಿ ಪಟ್ಟಾಧಿಕಾರವನ್ನು ಪಡೆದರು ಎಂಬುದು ನಿಶ್ಚಿತವಿಲ್ಲ, ಆದರೆ ಇವರು ಐಕ್ಯರಾದದ್ದು ೧೭೯೬ರಲ್ಲಿ ಎಂಬುದು ಸ್ಪಷ್ಟವಾಗಿದೆ. ಇವರ ಕಾಲದಲ್ಲಿ ನಡೆದ ಒಂದು ಅಹಿತಕರ ಘಟನೆಯೆಂದರೆ ಬನವಾಸಿಗೆ ಸಂಬಂಧಿಸಿದ್ದು. ಬನವಾಸಿಯ ಗೌಡನ ಮಗ ಅಸ್ಪೃಶ್ಯಳೊಬ್ಬಳ ಸಂಗವನ್ನು ಮಾಡಿದ್ದನೆಂಬ ಸಂಗತಿ ಸ್ವಾಮಿಗಳಿಗೆ ಅರಿಕೆಯಾಯಿತು. ಅವರು ಆ ಕುರಿತು ಈ ತಪ್ಪಿನಲ್ಲಿ ಭಾಗಿಯಾದ ಎಲ್ಲರನ್ನು ವಿಚಾರಣೆಗೆ ಒಳಪಡಿಸಬೇಕಾಯಿತು. ಆಗ ದೊಡ್ಡ ಪ್ರಮಾಣದ ತಪ್ಪು ಎಸಗಿದವರನ್ನು ಪ್ರತ್ಯೇಕಗೊಳಿಸಿ ಅಂದರೆ ಬಹಿಷ್ಕಾರ ಹಾಕಿ, ಚಿಕ್ಕ ಪ್ರಮಾಣದ ತಪ್ಪು ಮಾಡಿದವರನ್ನು ಅಪರಾಧ(ದಂಡ)ದ ಮೂಲಕ ಅಂಗೀಕರಿಸಲಾಯಿತು; ಇದು ಸ್ವಾಮಿಗಳ ಮನಸ್ಸಿಗೆ ತುಂಬ ಕಸಿವಿಸಿಯನ್ನುಂಟುಮಾಡಿತು. ಕೊಡಗಿನ ದೊರೆಗಳು ಮುರುಘಾ ಸಂಪ್ರದಾಯದ ಗುರುಗಳ ಬಗ್ಗೆ ವಿಶೇಷ ಗೌರವಾದರಗಳನ್ನು ಹೊಂದಿದ್ದರೆಂಬುದು ಈಗಾಗಲೇ ತಿಳಿದ ಸಂಗತಿ. ಕೊಡಗಿನಲ್ಲಿ ಅವರು ಮುರುಘಾ ಸಂಪ್ರದಾಯದ ಮಠಗಳನ್ನು ಮಾಡಿಸಿದ್ದಲ್ಲದೇ ಅವಕ್ಕೆ ದಾನ ದತ್ತಿಗಳನ್ನೂ ಕೂಡ ನೀಡಿದ್ದರೆಂಬುದನ್ನು ಇಲ್ಲಿ ಸ್ಮರಿಸಬಹುದು; ಇಂತಹ ಕೊಡಗಿನ ದೊರೆಗಳಲ್ಲಿ ಒಬ್ಬ ೧ನೆಯ ವೀರ ರಾಜೇಂದ್ರ ಒಡೆಯರ್. ಇವನನ್ನು ದೊಡ್ಡ ವೀರರಾಜ ಎಂತಲೂ ಕರೆದಿರುವುದುಂಟು, ಇವನು ೧೭೮೧ರಿಂದ ೧೮೦೯ರವರೆಗೆ ಕೊಡಗು ರಾಜ್ಯವನ್ನು ಆಳಿದನು. ಇವನ ಕೊನೆ ದಿನಗಳಲ್ಲಿ ಕೊಡಗಿನ ಚಂಗಡಿಹಳ್ಳಿಯಲ್ಲಿದ್ದ ಮುರಿಗೆ(ಶಾಖಾ)ಮಠದ ಗುರುಲಿಂಗ ಸ್ವಾಮಿಗಳೆಂಬುವರಿಗೆ ೧೮೦೮ರ ನವೆಂಬರ್ ೧೬ರಂದು ನಾಲ್ಕುನಾಡು ಎಂಬ ಸ್ಥಳದ ಅರಮನೆಯಲ್ಲಿದ್ದಾಗ ಒಂದು ಪತ್ರವನ್ನು ಬರೆದು ತನಗೆ ಬೇಕಾದ ಕೆಲವು ವೀರಶೈವ ತತ್ತ್ವಕೃತಿಗಳನ್ನು, ಪುರಾಣ ಕೃತಿಗಳನ್ನು ಕಳಿಸಿಕೊಡಬೇಕೆಂದು ಅದರಲ್ಲಿ ಕೇಳಿದ್ದಾನೆ. ಆ ಕೃತಿಗಳಲ್ಲಿ ನಿಘಂಟಿನ ಸಿದ್ಧಲಿಂಗ ಸ್ವಾಮಿಯವರ ಒಂದು ಕೃತಿಯನ್ನು ಕಳುಹಿಸಿಕೊಡುವಂತೆ ಕೇಳಿದ್ದಾನೆ. ಸಿದ್ಧಲಿಂಗ, ಸಿದ್ಧಬಸವ, ಸಿದ್ಧವೀರ, ಈ ಹೆಸರುಗಳು ಒಮ್ಮೊಮ್ಮೆ ಒಂದರ ಬದಲಿಗೆ ಒಂದು ಬಳಕೆಯಾಗಿರುವುದುಂಟು. ಹಾಗೆಯೇ ನೈಘಂಟಿನ ಸಿದ್ಧಬಸವ ಸ್ವಾಮಿಗಳನ್ನು ಅವನು ನಿಘಂಟಿನ ಸಿದ್ಧಬಸವ ಸ್ವಾಮಿಗಳೆಂದು ಕರೆದಿದ್ದಾನೆಂದು ಕಾಣುತ್ತದೆ. ಈ ಸ್ವಾಮಿಗಳು ಅವನು ಪತ್ರ ಬರೆಯುವ ಕಾಲಕ್ಕೆ ಆಗಲೇ ಲಿಂಗೈಕ್ಯರಾಗಿದ್ದರು. ಅವರು ಜೀವಿತ ಕಾಲದಲ್ಲಿ ಯಾವುದೋ ಒಂದು ತತ್ತ್ವ ಕೃತಿಯನ್ನೋ ಸಾಹಿತ್ಯ ಕೃತಿಯನ್ನೋ ಬರೆದಿದ್ದಂತೆ ಕಾಣುತ್ತದೆ. ಆದರೆ ಅದು ಯಾವುದೆಂಬುದು ತಿಳಿಯದು. ಇದರಿಂದ ನೈಘಂಟಿನ ಸಿದ್ಧಬಸವ ಸ್ವಾಮಿಗಳು ಕೂಡ ಕೆಲವು ಕೃತಿಗಳನ್ನು ರಚಿಸಿದ್ದಿರಬೇಕು. ಈ ದೊರೆ ೧೮೦೯ರ ಜೂನ್ ೮ರಂದು ನಿಧನನಾದನು. ಇದನ್ನು ನೋಡಿದರೆ ನಿಧನನಾಗುವ ೬ ತಿಂಗಳಿಗೂ ಮುಂಚೆ ಮೇಲೆ ಹೇಳಿದ ಪತ್ರವನ್ನು ಬರೆದಿದ್ದನೆಂದು ವ್ಯಕ್ತವಾಗುತ್ತದೆ. ನೈಘಂಟಿನ ಸಿದ್ಧಬಸವ ಸ್ವಾಮಿಗಳು ಹಾವೇರಿ ಪಟ್ಟಣಕ್ಕೆ ಬಂದು ಅಲ್ಲಿ ೧೭೯೬ರಲ್ಲಿ ಲಿಂಗೈಕ್ಯರಾದರು. ಹಾವೇರಿಯ ಹೊರವಲಯದಲ್ಲಿ ಹಿಂದಿನ ಕಾಲದಲ್ಲೇ ಕಟ್ಟಲಾಗಿರುವ ಗದ್ದುಗೆಯ ಸುಂದರ ಕಟ್ಟಡ ಈಗಲೂ ನೋಡಬಹುದು. ಇವರ ತರುವಾಯದಲ್ಲಿ ಸಣ್ಣಬರಹದ ರಾಚವಟ್ಟಿ ಸ್ವಾಮಿಗಳೆಂಬುವರು ಪೀಠವನ್ನು ಅಲಂಕರಿಸಿದರು. ಕೆಲವು ಹಸ್ತಪ್ರತಿಗಳಲ್ಲಿ ಇವರನ್ನು ಸಣ್ಣಬರಹದ ರಾಚವಟಿ ಸ್ವಾಮಿಗಳೆಂದು ಕರೆದರೆ, ಇನ್ನು ಕೆಲವು ಹಸ್ತಪ್ರತಿಗಳಲ್ಲಿ ಇವರನ್ನು ಒಪ್ಪತ್ತಿನ ಚನ್ನವೀರ ಸ್ವಾಮಿಗಳೆಂದು ಕರೆಯಲಾಗಿದೆ. ಒಂದು ಹಸ್ತಪ್ರತಿಯಲ್ಲಿ ಒಪ್ಪೊತ್ತಿನ ಸಣ್ಣ ಬರಹದ ಸ್ವಾಮಿಗಳೆಂದು ಹೆಸರಿಸಿರುವುದುಂಟು. ಬಹಳ ಹಸ್ತಪ್ರತಿಗಳಲ್ಲಿ ಇವರನ್ನು ಸಣ್ಣಬರಹದವರೆಂದೇ ಕರೆಯಲಾಗಿದೆ. ಹಾಗಾಗಿ ಇಲ್ಲಿ ಇವರ ಹೆಸರನ್ನು ಸಣ್ಣ ಬರಹದ ರಾಚವಟ್ಟಿ ಸ್ವಾಮಿಗಳೆಂದೇ ಕರೆಯುತ್ತಾ ಹೋಗಲಾಗಿದೆ. ಇವರು ಸಣ್ಣಬರಹದ ಬುಡಕಟ್ಟಿನವರೋ ಅಥವಾ ಒಪ್ಪೊತ್ತಿನ ಬುಡಕಟ್ಟಿನವರೋ ಇದ್ದರೆಂದು ಕಾಣುತ್ತದೆ.

ಸಣ್ಣ ಬರಹದ ರಾಚವಟ್ಟಿ ಸ್ವಾಮಿಗಳು
ಇವರು ೧೭೯೬ರಿಂದ ೧೮೩೨ರವರೆಗೆ ಪೀಠಾಧೀಶರಾಗಿದ್ದರು. ಇವರು ಮಠದಲ್ಲಿ ದಾಸೋಹ ಮುಂತಾದ ಎಂದಿನ ಕಾರ್ಯಗಳನ್ನು ನಿರ್ವಹಿಸುತ್ತಾ, ಉತ್ತರದ ಕಾಶಿ, ದಕ್ಷಿಣದ ರಾಮೇಶ್ವರದವರೆಗೆ ಎಲ್ಲಾ ರಾಜ್ಯಗಳಲ್ಲಿಯೂ ಇದ್ದ ವಿರಕ್ತಮಠಗಳ ಏಳನೂರು ಬುಡಕಟ್ಟಿನ ಚರಮೂರ್ತಿಗಳಿಗೆ, ಪ್ಯಾಟಿ ದೈವದವರಿಗೆ, ವಿವಿಧ ದೊರೆಗಳ ಸಂಸ್ಥಾನದವರಿಗೆ, ಮಠದಿಂದ ನಿರೂಪಗಳನ್ನು ಕಳುಹಿಸುತ್ತಾ ತಮ್ಮ ಖಾಸಾದ ಚರಮೂರ್ತಿಗಳನ್ನು ಎಲ್ಲ ಕಡೆಗೂ ಕಳುಹಿಸಿ ಕಪ್ಪ ಕಾಣಿಕೆ ಮುಂತಾದವುಗಳನ್ನು ತರಿಸಿಕೊಳ್ಳುತ್ತ, ವಿರೋಧಿ ವರ್ತನೆ ಮಾಡಿದ ಜನಗಳಿಗೆ ಬಹಿಷ್ಕಾರ ಮುಂತಾದ ಶಿಕ್ಷೆ ಕೊಡುತ್ತ, ಭಕ್ತಿಯಿಂದ ನಡೆದುಕೊಳ್ಳುವವರಿಗೆ ರಕ್ಷಣೆ ಕೊಡುತ್ತ, ಅತ್ಯಂತ ಕ್ರಿಯಾಶೀಲರಾಗಿ ಮಠದ ಕರ್ತವ್ಯಗಳನ್ನು ನಿರ್ವಹಿಸುತ್ತ ಬಂದರು. ಸಣ್ಣ ಗುರುಪಾದ ಸ್ವಾಮಿಗಳವರ ಕಾಲದಲ್ಲಿ ಹೈದರಾಲಿಯು ಲೂಟಿಗಾಗಿ ಒಳನುಗ್ಗಲು ಕೆಡವಿಸಿದ್ದ ಬೃಹನ್ಮಠದ ಗೋಡೆಗಳನ್ನು ಹೊಸದಾಗಿ ಕಟ್ಟಿಸಿದರು. ಹೀಗೆ ಸಣ್ಣ ಬರಹದ ರಾಚವಟ್ಟಿಯ ಸ್ವಾಮಿಗಳು ಬೃಹನ್ಮಠದ ಪೀಠಾಧೀಶರಾಗಿ ಅತ್ಯಂತ ಕ್ರಿಯಾಶೀಲರಾಗಿ ಅದನ್ನು ನಡೆಸಿಕೊಂಡು ಬಂದರು. ಇಷ್ಟೆಲ್ಲಾ ಕ್ರಿಯಾಶೀಲರಾಗಿದ್ದ ಸ್ವಾಮಿಗಳು ಈ ಮಠದ ಪೀಠಾಧೀಶರಾದ ಕಾಲಕ್ಕೆ ಘರ್ಷಣೆಯ ಪ್ರಸಂಗವೊಂದು ಜರುಗಿತ್ತು ಎಂದರೆ ಆಶ್ಚರ್ಯವಾಗಬಹುದು. ಅದರ ವಿವರಣೆ ಹೀಗಿದೆ: ಇವರ ಪೂರ್ವಾಧಿಕಾರಿಗಳಾಗಿದ್ದ ನೈಘಂಟಿನ ಸಿದ್ಧಬಸವ ಸ್ವಾಮಿಗಳು ಹಾವೇರಿಯಲ್ಲಿ ಲಿಂಗೈಕ್ಯರಾದ ಕಾಲಕ್ಕೆ ಮಠದ ಭಕ್ತನಾಗಿದ್ದ ಹಸಿಬಿ ಶಿವಬಸಪ್ಪ ಎಂಬಾತ ಸ್ವಾಮಿಗಳ ಸಂಗಡವಿದ್ದ ಪೀಠಾಧೀಶ ಸ್ಥಾನ ಲಾಂಛನಗಳಾದ ಶಿಖಾ ಶೈಲಗಳನ್ನು ತನ್ನ ಮನೆಗೆ ಒಯ್ದು ಇಟ್ಟುಕೊಂಡನು. ಆಗ ಅವನು ಮತ್ತು ಹಾವೇರಿಯ ಶೆಟ್ರುದೈವದವರು ತಮಗೆ ಬೇಕಾದವರಿಗೆ ಪಟ್ಟಮಾಡಬೇಕೆಂತಲೂ ಆ ಪಟ್ಟಾಧಿಕಾರ ಹಾವೇರಿಯಲ್ಲಿ ನಡೆಯಬೇಕೆಂತಲೂ ನಿಶ್ಚಯಿಸಿಕೊಂಡರು. ಆಗ ಚಿತ್ರದುರ್ಗದ ಬೃಹನ್ಮಠದಲ್ಲಿದ್ದ ಹರಗುರು ಚರಮೂರ್ತಿಗಳು ದುರ್ಗದ ಪೇಟೆಶೆಟ್ರು ದೈವದವರು ಹಾವೇರಿಯವರ ನಿಶ್ಚಯವನ್ನು ಒಪ್ಪದೇ ಮಾಮೂಲಿನಂತೆ ಅದೆಲ್ಲವೂ ಚಿತ್ರದುರ್ಗದಲ್ಲಿ ಜರುಗಬೇಕು ಎಂದು ಹೇಳಿ ಶಿಖಾ ಶೈಲಗಳನ್ನು ಮರಳಿಸಲು ತಿಳಿಸಿದರು. ಆದರೆ ಅದಕ್ಕೆ ಹಾವೇರಿಯವರು ಕಿವಿಗೊಡಲಿಲ್ಲ. ಆಗ ಚಿತ್ರದುರ್ಗದವರು ಚಿತ್ರದುರ್ಗದಲ್ಲಿ ಇದ್ದ ಕರ್ನಲ್ ಎಂಜಿನ್ ಎಂಬ ರಕ್ಷಣಾಧಿಕಾರಿಯೊಬ್ಬರಿಗೆ ದೂರು ಕೊಟ್ಟರು. ಆಗ ಆ ಅಧಿಕಾರಿ ಸಂದರ್ಭದ ಗಹನತೆಯನ್ನು ಅರ್ಥಮಾಡಿಕೊಂಡು ನಾಲ್ಕುಜನ ಬಂದೂಕುಧಾರಿಗಳನ್ನು ಕೊಟ್ಟು ಅವರು ಶಿಖಾ ಶೈಲಗಳನ್ನು ಕೊಡದಿದ್ದರೆ ಬಲಪ್ರಯೋಗದಿಂದ ತರಬೇಕೆಂದು ತಾಕೀತು ಮಾಡಿ ಭಕ್ತ ಜನಗಳ ಜೊತೆಗೆ ಹಾವೇರಿಗೆ ಕಳುಹಿಸಿಕೊಟ್ಟರು. ಆಗ ಹಾವೇರಿಯ ಜನ ಘರ್ಷಣೆಗೆ ದಾರಿಯಾದೀತೆಂದು ಆಲೋಚಿಸಿ ಚಿತ್ರದುರ್ಗದ ಬೃಹನ್ಮಠದಲ್ಲಿ ಪಟ್ಟ ಬೇಕಾದರೆ ಆಗಲಿ, ಆದರೆ ಮೆರವಣಿಗೆ ಮಾತ್ರ ಹಾವೇರಿಯಲ್ಲಿಯೇ ಮಾಡಬೇಕೆಂದು ಪಟ್ಟು ಹಿಡಿದರು. ಅನಂತರ ಶಿಖಾ ಶೈಲಗಳನ್ನು ಚಿತ್ರದುರ್ಗದವರ ವಶಕ್ಕೆ ಕೊಟ್ಟರು. ದುರ್ಗದವರು ಅವನ್ನು ತೆಗೆದುಕೊಂಡು ದುರ್ಗಕ್ಕೆ ಹೋದ ಕೂಡಲೇ ಹಾವೇರಿ ಪೇಟೆಯವರು ದುರ್ಗಕ್ಕೆ ಹೋಗುವುದರೊಳಗೆ ಪಟ್ಟ, ಮೆರವಣಿಗೆ ಎಲ್ಲವನ್ನು ಮಾಡಿ ಮುಗಿಸಿಬಿಟ್ಟರು. ಹೀಗೆ ರಾಚವಟ್ಟಿ ಸ್ವಾಮಿಗಳವರಿಗೆ ಪಟ್ಟಾಧಿಕಾರ ಜರುಗಿತು. ಮೈಸೂರಿನ ಮಹಾರಾಜರು ಸ್ವಾಮಿಗಳವರಿಗೆ ಒಂದು ಪತ್ರವನ್ನು ಬರೆದು ಅದರಲ್ಲಿ, ‘ಸ್ವಾಮಿಗಳು ಮೈಸೂರಿಗೆ ದಯಮಾಡಿಸಿ ತಮ್ಮ ಸೇವೆಯನ್ನು ಸ್ವೀಕರಿಸಬೇಕು' ಎಂದು ಅತ್ಯಂತ ವಿನಮ್ರತೆಯಿಂದ ಕೇಳಿಕೊಂಡರು. ಅದರಂತೆ ಸ್ವಾಮಿಗಳವರಲ್ಲಿಗೆ ಗುರಿಕಾರ ರಾಮಲಿಂಗಯ್ಯ, ಅರಮನೆಯ ಊಳಿಗದ ಮಾದಯ್ಯ, ಗವಿಮಠದ ಅರುಣಾಚಲ ಸಿದ್ಧಲಿಂಗಪ್ಪ ಮುಂತಾದ ಪ್ರತಿನಿಧಿಗಳನ್ನು ಮತ್ತು ಒಂದು ಚಿಕ್ಕ ಸೇನೆ ಮತ್ತು ಪರಿವಾರವನ್ನು ಕಳುಹಿಸಿಕೊಟ್ಟಿದ್ದರು. ಆ ಪತ್ರದ ಅಭಿಪ್ರಾಯವನ್ನು ಮನಸ್ಸಿಗೆ ತೆಗೆದುಕೊಂಡ ಸ್ವಾಮಿಗಳು ಮೈಸೂರಿಗೆ ಬರುವುದಾಗಿ ಒಪ್ಪಿಕೊಂಡರು. ಮೈಸೂರಿನ ಮಹಾರಾಜರು ಸ್ವಾಮಿಗಳು ತಮ್ಮ ಪ್ರಯಾಣದಲ್ಲಿ ಹಾದುಬರುವ ಎಲ್ಲಾ ಗ್ರಾಮ, ತಾಲ್ಲೂಕಿನ ಅಧಿಕಾರಿಗಳಿಗೆ ಪತ್ರಗಳನ್ನು ಕಳುಹಿಸಿ ಅವರಿಗೆ ಯಾವ ರೀತಿಯಲ್ಲೂ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳಬೇಕೆಂದು ಅವರನ್ನು ವಿನಯ ಗೌರವಗಳಿಂದ ಬರಮಾಡಿಕೊಂಡು ಅವರ ಅಗತ್ಯಗಳನ್ನು ನೋಡಿಕೊಂಡು ತಂಗುವುದಾದರೆ ಅದಕ್ಕೆ ವ್ಯವಸ್ಥೆ ಮಾಡಿ ಅವರು ಮುಂದಿನ ಊರಿಗೆ ಹೊರಟಾಗ ಅದೇ ವಿನಯ ಗೌರವಗಳಿಂದ ಅವರನ್ನು ಬೀಳ್ಕೊಡಬೇಕೆಂದು ತಾಕೀತು ಮಾಡಿದರು. ಇದಕ್ಕೆ ಉಲ್ಲಂಘನೆಯಾದರೆ ಅದಕ್ಕೆ ತಕ್ಕ ಕ್ರಮ ಜರುಗಿಸಲಾಗುವುದೆಂದು ಎಚ್ಚರಿಕೆ ಕೊಟ್ಟಿದ್ದರು. ಈ ರೀತಿ ಸ್ವಾಮಿಗಳವರು ಪ್ರಯಾಣ ಮಾಡಿ ಮೈಸೂರನ್ನು ತಲುಪಿದರು. ಮಹಾರಾಜರು ತಮ್ಮ ಸಮಸ್ತ ಪರಿವಾರ ಸಕಲ ವಾದ್ಯವೃಂದ, ಶೃಂಗರಿಸಿದ ಆನೆ, ಕುದುರೆಗಳ ಸಮೂಹ ಇವುಗಳ ಮೂಲಕ ಸ್ವಾಮಿಗಳನ್ನು ಬರಮಾಡಿಕೊಂಡನು. ಸ್ವಾಮಿಗಳನ್ನು ರತ್ನಖಚಿತ ಸಿಂಹಾಸನದ ಮೇಲೆ ಕೂರಿಸಿ ಅವರ ಮರ್ಯಾದಾರ್ಥವಾಗಿ ಕುಶಾಲ ತೋಪುಗಳನ್ನು ಆರಿಸಿ ಚಿನ್ನದ ಬಿಂದಿಗೆಗಳಲ್ಲಿ ತಂದ ನಿರ್ಮಲ ಜಲದಿಂದ ಸ್ವಾಮಿಗಳ ಪಾದವನ್ನು ತೊಳೆದು ರತ್ನ, ಪುಷ್ಪ, ಇತರ ಪರಿಕರಗಳಿಂದ ಅವರ ಪಾದಪೂಜೆಯನ್ನು ಸಾಂಗವಾಗಿ ನೆರವೇರಿಸಿ, ಸ್ವಾಮಿಗಳಿಗೆ ಸಾಷ್ಟಾಂಗ ನಮಸ್ಕಾರ ಮಾಡಿ ಅವರ ಆಶೀರ್ವಾದವನ್ನು ಪಡೆದರು. ಆ ತರುವಾಯ ಸ್ವಾಮಿಗಳವರು ಕೆಲವು ದಿನ ಅಲ್ಲಿಯೇ ಇದ್ದು ಮಹಾರಾಜರ ಪೂಜೆ ಸೇವೆ ಕಾಣಿಕೆಗಳನ್ನು ಸ್ವೀಕರಿಸಿ ಮೈಸೂರಿನಿಂದ ಚಿತ್ರದುರ್ಗದ ಕಡೆಗೆ ಪ್ರಯಾಣ ಬೆಳೆಸಿದರು.
ಸ್ವಾಮಿಗಳವರು ಚಿತ್ರದುರ್ಗಕ್ಕೆ ಬಂದ ಕೆಲವು ವರ್ಷಗಳ ತರುವಾಯ "ಈ ಸ್ಥಳದಲ್ಲಿ ಅನೇಕ ಉತ್ಪಾತಗಳು ನಡೆಯುತ್ತವೆ. ಇವುಗಳನ್ನು ಕಣ್ಣಿನಿಂದ ನೋಡಬಾರದು" ಎಂಬುದಾಗಿ ಮಠದಲ್ಲಿದ್ದ ಚರಮೂರ್ತಿಗಳಿಗೆ ತಿಳಿಸಿ ಅಲ್ಲಿಂದ ದಾವಣಗೆರೆಯ ಕಡೆಗೆ ಪಾದಯಾತ್ರೆಯನ್ನು ಕೈಗೊಂಡರು. ಆಗ ದಾವಣಗೆರೆಯ ಸಮೀಪದ ಬೇತೂರು ಗ್ರಾಮದ ಗೌಡ ಬಸಪ್ಪನೆಂಬುವವನು ಸ್ವಾಮಿಗಳನ್ನು ಅಡವಿಯ ದಾರಿಯಲ್ಲಿಯೇ ಕಂಡು "ತಾವು ಮುಂದೆ ದಯಮಾಡಿಸದೇ ನನ್ನ ಮನೆಯಲ್ಲಿಯೇ ಇರಬೇಕು, ನನ್ನ ಸೇವೆಯನ್ನು ಸ್ವೀಕರಿಸಬೇಕು" ಎಂದು ಸಾಷ್ಟಾಂಗ ಹಾಕಿ ಅರಿಕೆ ಮಾಡಿಕೊಂಡನು. ಅವನ ಮನವಿಗೆ ಒಪ್ಪಿದ ಸ್ವಾಮಿಗಳು ಅವನ ಮನೆಗೆ ಹೋದರು. ಇತ್ತ ಕಡೆ ನಗರದ ಸೀಮೆ, ದುರ್ಗದ ಸೀಮೆ ಈ ಪ್ರದೇಶಗಳಿಂದ ಜನ ಬಂದು ಇಪ್ಪತ್ತು ಸಾವಿರದವರೆಗೂ ಗುಂಪಾಯಿತು. ಅವರೆಲ್ಲರೂ ಮಠಕ್ಕೆ ಬಂದು ತಂಗಿ, ಅವರ ತಂಗುವಿಕೆಗೆ ಮಠಕ್ಕೇ ಖರ್ಚು ವೆಚ್ಚ ಬರುವಂತೆ ಮಾಡಿ ಮಹಾಸ್ವಾಮಿಗಳ ವಿಷಯದಲ್ಲಿ ವಿರೋಧ ವರ್ತನೆಯನ್ನು ತೋರಿಸುತ್ತಾ ಬಂದರು. ಈ ಸಂಗತಿ ಸರ್ಕಾರದ ಅಧಿಕಾರಿಗಳ ಮೂಲಕ ಮೈಸೂರಿನ ದೊರೆಗಳಿಗೆ ವರದಿಯಾಯಿತು. ಆಗ ಎರಡು ಸಾವಿರ ಕುದುರೆ, ನಾಲ್ಕು ಸಾವಿರ ಕಾಲದಳದವರು ಮಠದ ಬಳಿಗೆ ಹೋಗಿ ಬಂದೋಬಸ್ತು ಮಾಡಿ ಉದ್ವರ್ತನೆ ಮಾಡಿದವರನ್ನು ದಸ್ತಗಿರಿ ಮಾಡತಕ್ಕದ್ದೆಂದು ಹುಕುಂ-ಆದೇಶವಾಯಿತು. ಅದರಂತೆ ಆ ಸೈನ್ಯದವರೆಲ್ಲರೂ ರಾತ್ರೋರಾತ್ರಿ ಮಠಕ್ಕೆ ಮುತ್ತಿಗೆ ಹಾಕಿ ಒಳಹೊಕ್ಕು ಆ ಜನಸಮೂಹದ ಮುಖ್ಯಸ್ಥರಾದ ನೂರಾರು ಜನರನ್ನು ದಸ್ತಗಿರಿ ಮಾಡಿ ಬೇಡಿಹಾಕಿ ವಶಕ್ಕೆ ತೆಗೆದುಕೊಂಡರು. ಹಾಗೆಯೇ ಸಾವಿರಾರು ಜನರ ಕಿವಿ ಮೂಗು ಕೊಯ್ದರು. ಮೂರು-ನಾಲ್ಕು ದಿವಸಗಳಾದ ಮೇಲೆ ಮುಖ್ಯಸ್ಥರಾದವರನ್ನು ಕೊಲ್ಲಿಸಿಬಿಟ್ಟರು. ಈ ಎಲ್ಲಾ ಸಂಗತಿಗಳು ಸ್ವಾಮಿಗಳವರಿಗೆ ತಿಳಿದುಬಂದು ಮಠದಲ್ಲಿ ಧರ್ಮಬಾಹಿರರಾದ ಜನಗಳು ಹೊಕ್ಕು ಇಷ್ಟು ದಾಂದಲೆ ನಡೆಸಿದ ಮೇಲೆ ನಾವು ಮಠಕ್ಕೆ ಹೋಗುವುದಿಲ್ಲ, ಉತ್ತರ ದೇಶಕ್ಕೆ ಹೋಗುತ್ತೇವೆ ಎಂದು ಸ್ವಾಮಿಗಳು ಹೇಳಿಬಿಟ್ಟರು. ಈ ಸಂಗತಿ ಕೆಲವರು ಮೈಸೂರು ಮಹಾರಾಜರಿಗೆ ಅರಿಕೆ ಮಾಡಿ ಬರೆದುಕೊಂಡರು. ಇದರಿಂದ ಮಹಾರಾಜರು ಸ್ವಾಮಿಗಳು ಎಲ್ಲೇ ಇದ್ದರೂ ಅವರನ್ನು ಕರೆದುಕೊಂಡು ಮಠಕ್ಕೆ ಹೋಗಲಿ ಮಠಕ್ಕೆ ಯಾವುದೇ ವಸ್ತು ಪರಿಕರ ನಷ್ಟವಾಗಿದ್ದರೂ ಅದರ ಖರ್ಚುವೆಚ್ಚವನ್ನು ಸರ್ಕಾರದಿಂದ ಕೊಡಬೇಕು ಎಂದು ಆದೇಶವನ್ನು ಬರೆದು ಸ್ವಾಮಿಗಳ ಕಡೆ ಕಳುಹಿಸಿಕೊಟ್ಟರು. ಅದರಂತೆ ಜನರೆಲ್ಲ ಸೇರಿ, ಸರ್ಕಾರದ ಪ್ರತಿನಿಧಿಗಳೂ ಸೇರಿ, ಸ್ವಾಮಿಗಳಲ್ಲಿ ಬಹಳವಾಗಿ ಅರಿಕೆ ಮಾಡಿಕೊಂಡು ಅವರನ್ನು ಉತ್ಸಾಹದಿಂದ ಕರೆದುಕೊಂಡು ಬಂದು ಬೃಹನ್ಮಠಕ್ಕೆ ಪ್ರವೇಶ ಮಾಡಿಸಿದರು. ಮಠದಲ್ಲಿ ಆಗ ಇದ್ದ ಎಲ್ಲ ವಸ್ತು ಪರಿಕರವನ್ನು ಸ್ವಾಮಿಗಳವರ ಸನ್ನಿಧಿಗೆ ಬಿಟ್ಟುಕೊಟ್ಟು ಸರ್ಕಾರದಿಂದಲೂ ಒಂದಿಷ್ಟು ಹಣವನ್ನು ಕೊಟ್ಟರು. ಆ ತರುವಾಯದಲ್ಲಿ ರೈತ ಜನಗಳು ವಿರೋಧವನ್ನು ವ್ಯಕ್ತಪಡಿಸಿದಾಗ ಅವರಿಗೆ ಸೂಕ್ತ ಸಮಜಾಯಿಷಿ ಕೊಡದೇ, ವಿಚಾರ ಮಾಡದೇ ಮೈಸೂರು ಪ್ರಭುತ್ವದವರು ಅವರನ್ನು ಕೊಲ್ಲಿಸುತ್ತಾರೆ ಎಂದು ಕುಂಪಣಿಯವರು ಮೈಸೂರು ದೊರೆಗಳ ಅಧಿಕಾರವನ್ನು ತಮ್ಮ ಸ್ವಾಧೀನ ಮಾಡಿಕೊಂಡರು. ಅಲ್ಲಿಂದ ಐವತ್ತು ವರ್ಷಗಳವರೆಗೆ ಈ ಬ್ರಿಟಿಷ್ ಕಮಿಷನರ್‌ರವರ ಆಡಳಿತ ನಡೆಯಿತು. ಇವರ ಆಡಳಿತ ಅವಧಿಯ ಉತ್ತರಾರ್ಧದಲ್ಲಿ, ೧೮೬೮ರಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಕೂಡ ಅಸ್ತಂಗತರಾದರು. ಇಲ್ಲಿ ಎತ್ತಿ ಹೇಳಬೇಕಾದ ಒಂದು ಅಂಶವೇನೆಂದರೆ ಬ್ರಿಟಿಷರು ಮೈಸೂರು ದೊರೆಗಳ ಆಡಳಿತ ತಪ್ಪಿಸಿ ಕಮಿಷನರ್‌ನ್ನು ನೇಮಿಸಲು ಅವರಿಗೆ ಇದ್ದ ಕಾರಣಗಳಲ್ಲಿ ಈ ಮಠದಲ್ಲಿ ನಡೆದ ದೊಂಬಿ- ಹಿಂಸೆಗಳೂ ಕೂಡ ಸೇರಿದ್ದವು ಎಂದು ಇದರಿಂದ ತಿಳಿಯುತ್ತದೆ. ಮೇಲೆ ಹೇಳಿದ ಘಟನೆ ‘ಕರ್ನಾಟಕ ಇತಿಹಾಸ'ದಲ್ಲಿ ‘ನಗರ ಬಂಡಾಯ' ಎಂದು ಕರೆದಿರುವ ಸಂದರ್ಭದಲ್ಲಿ ನಡೆದದ್ದು ಎನ್ನುವುದನ್ನು ನೆನೆಯಬಹುದು. ಸ್ವಾಮಿಗಳು ಒಂದು ದಿನ ಸ್ನಾನ ಶಿವಪೂಜೆ ಅನಂತರ ಸದಾಶಿವಪ್ಪನೆಂಬ ಭಕ್ತನಿಂದ ಒಂದು ಪುಸ್ತಕ ತರಿಸಿಕೊಂಡು ಒಂದು ಏಕಾಂತ ಸ್ಥಳದಲ್ಲಿ ಕುಳಿತುಕೊಂಡರು. ಅಲ್ಲಿ ಸಾಯಂಕಾಲದಿಂದ ಬೆಳಗಿನ ಜಾವದವರೆಗೂ ಪುಸ್ತಕದ ವಾಚನ ಮತ್ತು ವ್ಯಾಖ್ಯಾನ ಇವುಗಳನ್ನು ನಡೆಸಿದರು. ಈ ರೀತಿ ಮೂರ್ತ ಮಾಡಿದ ಮೇಲೆ ಆ ಭಕ್ತನ ಸಂಗಡ "ನಾಳೆ ಬೆಳಗಿನ ಮೂರು ತಾಸಿಗೆ ಸರಿಯಾಗಿ ಈಶಾನ್ಯ ದಿಕ್ಕಿನಲ್ಲಿ ಮೋಡವಾಗಿ, ಗುಡುಗು ಮಿಂಚುಗಳು ಹುಟ್ಟುತ್ತವೆ. ಆಗ ನಾವು ಸಾಂಬಲೋಕಕ್ಕೆ ದಯಮಾಡಿಸುತ್ತೇವೆ" ಎಂದು ತಿಳಿಸಿದರು. ಕೂಡಲೇ ಆ ಭಕ್ತನಿಗೆ ಗಾಬರಿಯಾಗಿ ಅಲ್ಲಿದ ಹರಗುರುಚರಮೂರ್ತಿಗಳಿಗೂ, ದುರ್ಗದ ಶೆಟ್ರುದೈವದವರಿಗೂ ಈ ಸಂಗತಿಯನ್ನು ತಿಳಿಸಿದನು. ಹಾಗೆಯೇ ಈ ಸಂಗತಿ ಸರ್ಕಾರದ ಅಧಿಕಾರ ವರ್ಗದವರಿಗೂ ತಿಳಿಯಿತು. ಆಗ ಸಮಾಜದ ಭಕ್ತರೂ ಮಹೇಶ್ವರರೂ ಕೂಡಿ ಸ್ವಾಮಿಗಳು ಏನು ಅಪ್ಪಣೆ ಕೊಡಿಸುತ್ತಾರೋ ಎಂದು ಕಾದುಕೊಂಡಿದ್ದರು. ಆಗ ಸ್ವಾಮಿಗಳು ಮಠದ ರಾಜಾಂಗಣದಲ್ಲಿ ಉತ್ತರ ದಿಕ್ಕಿನಲ್ಲಿರುವ ಕೈಲಾಸದ ಬಾಗಿಲು ಎಂಬ ಬಾಗಿಲನ್ನು ತೆಗೆಸಿ ಅಲ್ಲಿ ಒಂದು ಮಂಚ ಹಾಕಿಸಿ ಸ್ನಾನ, ಶಿವಪೂಜೆ ತೀರಿಸಿಕೊಂಡು ಮಂಚದ ಮೇಲೆ ಒರಗಿದರು. ಆ ದಿವಸ ಬೆಳಗಿನಿಂದ ಹಿಡಿದು ರಾತ್ರಿ ಆರು ತಾಸಿನವರೆಗೂ ಯಾರು ಏನು ಅರಿಕೆ ಮಾಡಿಕೊಂಡರೂ ಏನೂ ಉತ್ತರ ಕೊಡದೆ ಮೌನಿಯಾಗಿದ್ದರು. ಅನಂತರ ಯಾವುದೋ ಕಾರಣಕ್ಕೆ ಅಶಾಂತರಾದವರಂತೆ ಉದ್ರೇಕಗೊಂಡು "ಮುಂದೆ ನಿಮ್ಮ ಯಾವ ಕಾರ್ಯಕ್ಕೂ ಸರ್ಕಾರ ಇದೆ" ಎಂದು ಉದ್ಗರಿಸಿ ಮಠಕ್ಕೆ ಸಂಬಂಧಿಸಿದ ಬೀಗದಕೈಯನ್ನು ಮುಂದಕ್ಕೆ ಹಾಕಿ ಮತ್ತೆ ಯಾವ ಮಾತು ಕೇಳಿಸಿಕೊಂಡಿದ್ದಾಗ್ಯೂ ಉತ್ತರಿಸದೆ ಮೌನಿಯಾದರು. ಅನಂತರದಲ್ಲಿ ಅವರೇ ಹೇಳಿದಂತೆ ಯಾವ ದಿಕ್ಕಿನಲ್ಲೂ ಕಾಣದ ಮೋಡ, ಗುಡುಗು, ಮಿಂಚುಗಳು ಈಶಾನ್ಯದಲ್ಲಿ ಕಾಣಿಸಿಕೊಂಡವು. ಅದನ್ನು ನೋಡಿ ಜನರಿಗೆ ಅತೀವ ಆಶ್ಚರ್ಯವಾಯಿತು. ಅದೇ ವೇಳೆಗೆ ನಗಾರಿ, ನೌಬತ್ತು ವಾದ್ಯಗಳ ಶಬ್ದ ಮೊದಲಾಯಿತು. ಸ್ವಾಮಿಗಳು ಭವಿಷ್ಯ ಹೇಳಿದ್ದಂತೆ ಸರಿಯಾಗಿ ಸಾಂಬಲೋಕಕ್ಕೆ ದಯಮಾಡಿಸಿದರು. ಆ ಹೊತ್ತಿಗೆ ಸರಿಯಾಗಿ ಸರ್ಕಾರದ ಅಧಿಕಾರಿಗಳು ಮಠದ ವಸ್ತು ಪರಿಕರಗಳೆಲ್ಲವನ್ನು ಬಂದೋಬಸ್ತು ಮಾಡಿಸಿ ಮೊಹರು ಮಾಡಿಸಿ ಪಹರೆ ಇಟ್ಟರು. ಈ ಸ್ವಾಮಿಗಳವರ ಗದ್ದುಗೆ ಈಗಲೂ ಬೃಹನ್ಮಠದ ಆವರಣದಲ್ಲಿ ಒಂದೆಡೆಯಿದೆ. ಇವರ ಉತ್ತರಾಧಿಕಾರಿಯಾಗಿ ಮುಂದೆ ಪೀಠಾಧೀಶರಾಗಿ ಬಂದವರು ಸಾವಳಿಗೆ ಗುರುಶಾಂತ ಸ್ವಾಮಿಗಳು.

ಸಾವಳಿಗೆ ಗುರುಶಾಂತ ಸ್ವಾಮಿಗಳು
ಇವರು ೧೮೩೨ರಿಂದಲೇ ಪೀಠಾಧೀಶರಾಗಿ ಕಾರ್ಯನಿರ್ವಹಿಸಲು ತೊಡಗಿದರಾದರೂ ಆರಂಭದಲ್ಲಿ ಎರಡು-ಮೂರು ವರ್ಷ ಇವರ ಸ್ಥಾನಕ್ಕೆ ಒಂದು ರೀತಿ ಗ್ರಹಣ ಹಿಡಿದ ಸ್ಥಿತಿ ಉಂಟಾಯಿತು. ಅದಕ್ಕೆ ಕಾರಣ ಮೈಸೂರಿನ ಕಡೆಯಿಂದ ಮುಮ್ಮಡಿ ಕೃಷ್ಣರಾಜ ಒಡೆಯರ ಪ್ರಭಾವವನ್ನು ಹೊಂದಿದ್ದ ಬಸವಲಿಂಗಪ್ಪ ಎಂಬ ಚರಮೂರ್ತಿ ಒಬ್ಬರು ಪೀಠಾಧೀಶರಾಗಿ ಅಧಿಕಾರ ವಹಿಸಿಕೊಳ್ಳಲು ಬಂದರು. ಆನೆ, ಒಂಟೆ, ಕುದುರೆ, ಅರಮನೆ ಊಳಿಗದವರು ಮತ್ತು ಸೈನ್ಯದೊಂದಿಗೆ ಬಂದ ಆ ಚರಮೂರ್ತಿಗಳನ್ನು ಬೃಹನ್ಮಠದಲ್ಲಿದ್ದ ಹರಗುರು ಚರಮೂರ್ತಿಗಳು ಬೃಹನ್ಮಠದ ಪೀಠಾಧೀಶರೆಂದು ಸ್ವೀಕರಿಸಲು ಸಮ್ಮತಿಸಲಿಲ್ಲ. ಆಗ ಚಿತ್ರದುರ್ಗದ ಹೊರಗೂ ಕೂಡ ಭಕ್ತವರ್ಗದಲ್ಲಿ ಭಿನ್ನಮತ ಏರ್ಪಟ್ಟಿತು. ಹಳೇ ಮೈಸೂರು ಪ್ರಾಂತದ ಪಶ್ಚಿಮ ಮತ್ತು ದಕ್ಷಿಣ ಭಾಗದ ಕೆಲವರು ಮೈಸೂರಿನಿಂದ ಬಂದವರೆ ಪೀಠಾಧೀಶರಾಗಲೆಂದು ಹೇಳತೊಡಗಿದರು. ಇನ್ನು ಉಳಿದಂತೆ ಹಳೇ ಮೈಸೂರಿನ ಉತ್ತರ ಭಾಗ ಮತ್ತು ಉತ್ತರ ಕರ್ನಾಟಕ ಪ್ರದೇಶದ ಭಕ್ತವರ್ಗದವರು ಸಾವಳಿಗೆ ಗುರುಶಾಂತ ಸ್ವಾಮಿಗಳೇ ಪೀಠಾಧೀಶರಾಗಲೆಂದು ಪಟ್ಟುಹಿಡಿದರು. ಹಾಗೆಯೇ ಮೈಸೂರು ಸರ್ಕಾರದ ಆಡಳಿತ ನೋಡಿಕೊಳ್ಳುತ್ತಿದ್ದ ಕಮಿಷನರ್‌ರವರಿಗೆ ದೂರು ಹೋಗಿ ಈ ಪಟ್ಟಾಧಿಕಾರದ ಪ್ರಕರಣ ಅವರ ವಿಚಾರಣೆಯಲ್ಲಿ ತೀರ್ಮಾನವಾಗಬೇಕೆಂದು ಆಯಿತು. ಅವರು ಈ ಬಗ್ಗೆ ವಿಚಾರಣೆ ಕೈಗೊಂಡು ಸಾವಳಿಗೆ ಗುರುಶಾಂತ ಸ್ವಾಮಿಗಳವರಿಗೆ ಪಟ್ಟವಾಗಬೇಕೆಂದು ತೀರ್ಮಾನವಾಯಿತು. ಈ ಸಂದರ್ಭಕ್ಕೆ ಸಂಬಂಧಿಸಿದಂತೆ ಒಂದು ಹೇಳಿಕೆಯಿದೆ: ಪಟ್ಟಾಧಿಕಾರದ ದೂರು ಇಂಗ್ಲೆಂಡಿನ ವಿಕ್ಟೋರಿಯಾ ರಾಣಿಯವರೆಗೂ ಹೋಯಿತೆಂದೂ ಆಗ ಆ ಬಗ್ಗೆ ಪರಿಶೀಲನೆ ಮಾಡಿದ ಮಹಾರಾಣಿ ಮೈಸೂರಿನಿಂದ ಬಂದ ಬಸವಲಿಂಗಪ್ಪ ಪೀಠಾಧೀಶರಾಗುವಂತಿಲ್ಲ ಎಂದೂ ಜನತೆ ತಮಗೆ ಬೇಕಾದವರನ್ನೆ ಪಟ್ಟಕ್ಕೆ ತರಬಹುದೆಂದು ಆಜ್ಞೆ ಹೊರಡಿಸಿದಳು ಎಂದೂ ಹೇಳುತ್ತಾರೆ. ಇದರ ಜೊತೆಗೆ ಈ ಆಜ್ಞೆಗೆ ಯಾರಾದರೂ ಅಡ್ಡಿ ಮಾಡಿದರೆ ಅದಕ್ಕೆ ತಕ್ಕ ಕ್ರಮ ಕೈಗೊಳ್ಳಲು ಒಂದು ಚಿಕ್ಕ ಸೈನ್ಯವನ್ನೂ ಮಹಾರಾಣಿ ಕಳುಹಿಸಿಕೊಟ್ಟಳು ಎಂದೂ ಸಹ ಹೇಳುತ್ತಾರೆ. ಇದೆಲ್ಲ ನಡೆಯುವ ಕಾಲದಲ್ಲಿ ಸ್ವಾಮಿಗಳು ಈಗಿನ ಬೃಹನ್ಮಠದ ಪಶ್ಚಿಮದ ಹಿಂಬದಿಯಲ್ಲಿ ‘ಚಿದ್ವಿಲಾಸ ಭವನ' ಎಂಬ ಕಟ್ಟಡವೊಂದನ್ನು ಕಟ್ಟಿಸಿಕೊಂಡು, ಅದರಲ್ಲಿ ತಮ್ಮ ಪೂಜೆ ಯೋಗಾದಿಗಳಿಗೆ ಅನುಕೂಲವಾಗುವಂತಹ ವಿವಿಧ ವಿಭಾಗಗಳನ್ನು ಮಾಡಿಸಿಕೊಂಡು, ಹಾಗೆಯೇ ಅದರ ಸುತ್ತ ಅರಣ್ಯೋಪಾದಿಯಲ್ಲಿ ‘ಚಿದಾರಣ್ಯ' ಎಂಬ ವನವೊಂದನ್ನು ಮಾಡಿಕೊಂಡರು. ಪಟ್ಟಾಧಿಕಾರದ ಪ್ರಕರಣ ಇತ್ಯರ್ಥವಾಗುವವರೆಗೂ ಅವರು ಅಲ್ಲೇ ವಾಸ್ತವ್ಯವನ್ನು ಹೂಡಿದ್ದರು ಎಂದು ಕಾಣುತ್ತದೆ. ಅದಾದ ಮೇಲೆ, ಮೈಸೂರಿನಿಂದ ಬಂದ ಬಸವಲಿಂಗಪ್ಪನವರು ಹೊರಟು ಹೋದ ಮೇಲೆ ಇವರು ಮೂಲ ಮಠದ ಕಟ್ಟಡಕ್ಕೆ ಮರಳಿರುವುದು ಸ್ಪಷ್ಟ. ಈ ಮಧ್ಯೆ ಸ್ವಾದಿ ಸಂಸ್ಥಾನದ ಬಸವಲಿಂಗ ಎಂಬ ರಾಜಕುಮಾರನಿಗೂ ಅವನ ತಾಯಿಗೂ ವಿರಸ ಉಂಟಾಗಿ ಅವನು ತನ್ನ ಸಂಸ್ಥಾನ ಮತ್ತು ಅಧಿಕಾರವನ್ನೆ ತೊರೆದು ಸಂನ್ಯಾಸ ಜೀವನ ಕೈಗೊಳ್ಳಬೇಕೆಂದು ನಿಶ್ಚಯ ಮಾಡಿದ ಸಂಗತಿ ಸ್ವಾಮಿಗಳಿಗೆ ತಿಳಿಯಿತು. ಸ್ವಾಮಿಗಳು ಅವನನ್ನು, ಅವನ ತಾಯಿಯನ್ನು ಮಠಕ್ಕೆ ಕರೆಯಿಸಿಕೊಂಡು ಇಬ್ಬರಿಗೂ ಹಿತೋಕ್ತಿಗಳನ್ನಾಡಿ ಅವರ ಮನಸ್ಸನ್ನು ತಿಳಿಗೊಳಿಸಿದರು. ಅಷ್ಟೇ ಅಲ್ಲ, ಪುಂಗನೂರು ದೊರೆಯ ಮಗಳೊಂದಿಗೆ ಅವನ ವಿವಾಹ ಜರುಗುವಂತೆ ಮಾಡಿದರು. ತಾಯಿ ಮಗನ ನಡುವೆ ಉಂಟಾಗಿದ್ದ ಅಸಮಾಧಾನದ ಕತ್ತಲೆ ದೂರವಾಯಿತು. ಹೊಳಲ್ಕೆರೆ ಸ್ಥಳದಲ್ಲಿ ಪ್ರಭುದೇವರ ಬಸಪ್ಪ ಎಂಬ ಭಕ್ತನೊಬ್ಬ ಸ್ವಾಮಿಗಳ ವಿಚಾರದಲ್ಲಿ ಲಘುವಾಗಿ ನಡೆದುಕೊಂಡು ಉಜ್ಜಯಿನಿಯ ಸ್ವಾಮಿಗಳನ್ನು ಹೊಳಲ್ಕೆರೆಗೆ ಕರೆಯಿಸಿಕೊಂಡು ಅವರನ್ನು ತನ್ನ ಮನೆಗೆ ಮೆರವಣಿಗೆಯ ಮೂಲಕ ಕರೆದುಕೊಂಡು ಹೋಗುವ ಸನ್ನಾಹದಲ್ಲಿದ್ದನು. ಆಗ ಬಸಪ್ಪನ ಹದಿನಾರು ವರ್ಷದ ಮಗ ಹೊಟ್ಟೆಯಲ್ಲಾದ ಉರಿಯನ್ನು ತಾಳಲಾರದೇ ಬಾವಿಗೆ ಬಿದ್ದು ಸತ್ತ ಎಂಬ ವಾರ್ತೆ ಬಂದಿತು. ಆಗ ಶೋಕದಿಂದ ತಲ್ಲಣಗೊಂಡ ಬಸಪ್ಪ ಸ್ವಾಮಿಗಳನ್ನು ಬಿಟ್ಟು ಮಗನನ್ನು ನೋಡಲು ಹೊರಟು ಹೋದನು. ಆಗ ಆ ಸ್ವಾಮಿಗಳಿಗೆ ಬಸಪ್ಪನು ಮಧ್ಯದಲ್ಲಿಯೇ ಬಿಟ್ಟು ಹೋದದ್ದು ಸರಿಯೆನಿಸಲಿಲ್ಲ. "ಈ ಬಸಪ್ಪನ ಮಾತಿನಿಂದ ನಾವು ಇಲ್ಲಿಗೆ ಬಂದದ್ದು ತಪ್ಪು ಮಾಡಿದಂತಾಯಿತು, ಇನ್ನು ಮೇಲೆ ನಾವು ಇತ್ತ ಕಡೆ ಬರುವುದಿಲ್ಲ" ಎಂದು ಚಿತ್ರದುರ್ಗ ಬೃಹನ್ಮಠದ ಸ್ವಾಮಿಗಳಿಗೆ ಒಂದು ಕಾಗದವನ್ನು ಬರೆದು ಕಳುಹಿಸಿ ತಮ್ಮ ಸ್ಥಳಕ್ಕೆ ಹಿಂತಿರುಗಿದರು. ಇದಾದ ಕೆಲಕಾಲದ ಮೇಲೆ ಪ್ರಭುದೇವರ ಬಸಪ್ಪನು ಮತಿಭ್ರಮಣೆಗೊಂಡು ತನ್ನ ಸಂಪತ್ತನ್ನು ಕಳೆದುಕೊಂಡು ಚಿತ್ರದುರ್ಗದ ಸ್ವಾಮಿಗಳ ಮನಸ್ಸಿಗೆ ಆಘಾತ ಮಾಡಿದ್ದರಿಂದ ನನಗೆ ಹೀಗಾಯಿತೆಂದು ತುಂಬ ಪಶ್ಚಾತ್ತಾಪಪಟ್ಟನು. ಸ್ವಾಮಿಗಳವರನ್ನು ಖುದ್ದಾಗಿ ದರ್ಶನ ಮಾಡಬೇಕೆಂದು ನಿಶ್ಚಯಿಸಿದನು. ಆದರೆ ಆರು ತಿಂಗಳವರೆಗೆ ಸ್ವಾಮಿಗಳ ದರ್ಶನ ಮಾಡುವುದು ಸಾಧ್ಯವಾಗಲಿಲ್ಲ. ಆಗ ಚಿತ್ರದುರ್ಗದ ಪೇಟೆಶೆಟ್ರು ದೈವದವರಿಗೆ ಬಸಪ್ಪನು ಎಲ್ಲಾ ವಿಷಯವನ್ನು ಹೇಳಿಕೊಂಡನು. ಆಗ ಅವರೆಲ್ಲರೂ ಸ್ವಾಮಿಗಳವರಲ್ಲಿ ಅವನ ಬಗ್ಗೆ ತಿಳಿಸಿ ಅವನ ಮೇಲೆ ಸ್ವಾಮಿಗಳ ಕೃಪೆಯಾಗಬೇಕೆಂದು ಬಿನ್ನಹ ಮಾಡಿಕೊಂಡರು. ಆಗ ಸ್ವಾಮಿಗಳು ಕರಗಿ ಬಸಪ್ಪನನ್ನು ಕರೆಯಿಸಿಕೊಂಡು, ಅವನಿತ್ತ ದಂಡ ಕಾಣಿಕೆಯನ್ನು ಒಪ್ಪಿಸಿಕೊಂಡು, ಬುದ್ಧಿವಾದದ ಮಾತುಗಳನ್ನು ಹೇಳಿ, ‘ಪುತ್ರ ಪ್ರಾಪ್ತಿರಸ್ತು' ಎಂದು ಆಶೀರ್ವಾದವನ್ನು ಕೂಡಾ ಮಾಡಿ ಕಳುಹಿಸಿದರು. ಸ್ವಾಮಿಗಳ ಆಶೀರ್ವಾದ ಫಲಿಸಿತೆನ್ನುವಂತೆ ಬಸಪ್ಪನಿಗೆ ಮತ್ತೊಬ್ಬ ಮಗ ಹುಟ್ಟಿದನಲ್ಲದೆ ಕ್ರಮೇಣ ಮತ್ತೆ ಐಶ್ವರ್ಯ ಕೈಗೂಡಿತು. ಅವನು ಸ್ವಾಮಿಗಳನ್ನು ಹೊಳಲ್ಕೆರೆಗೆ ಬಿಜೆಯ ಮಾಡಿಸಿಕೊಂಡು ಅವರನ್ನು ಗೌರವಿಸಬೇಕೆಂದು ಸನ್ನಾಹವನ್ನು ನಡೆಸಿದನು. ಆಗ ಈ ಮೆರವಣಿಗೆಯನ್ನು ತಡೆಯಲು ಹೊಳಲ್ಕೆರೆಯ ಕೆಲವು ಬ್ರಾಹ್ಮಣರು, ಅಲ್ಲಿಯ ಸುಭೇದಾರರು ಬ್ರಾಹ್ಮಣರಿದ್ದುದರಿಂದ ಅವರ ಬೆಂಬಲ ತಮಗೆ ಸಿಗುವುದೆಂದು ಯೋಚಿಸಿ ಕಾರ್ಯೋನ್ಮುಖರಾದರು. ಆ ಹೊತ್ತಿಗೆ ಅಮಲ್ದಾರರ ಹೆಂಡತಿ ಮತ್ತು ಮಗ ಇಬ್ಬರಿಗೂ ತೀವ್ರ ಅಸ್ವಸ್ಥತೆಯುಂಟಾಯಿತು. ಆಗ ಅಮಲ್ದಾರರು ವ್ಯಸನಚಿತ್ತರಾಗಿ ತಾವು ಸ್ವಾಮಿಗಳ ವಿರುದ್ಧ ಹೋದುದಕ್ಕೆ ಹೀಗಾಗಿರಬೇಕೆಂದೆನಿಸಿ, ಕೆಲವು ಬ್ರಾಹ್ಮಣರನ್ನು ಸಂಗಡ ಕರೆದುಕೊಂಡು ಸ್ವಾಮಿಗಳ ದರ್ಶನ ಮಾಡಿ ನಮಸ್ಕರಿಸಿ, ತಮ್ಮ ಪಶ್ಚಾತ್ತಾಪವನ್ನು ನಿವೇದಿಸಿಕೊಂಡರು. ಆಗ ಸ್ವಾಮಿಗಳು ಅದನ್ನು ಮನಸ್ಸಿಗೆ ತೆಗೆದುಕೊಂಡು ಅವರಿಗೆ ಬುದ್ಧಿವಾದವನ್ನು ಹೇಳಿ ಆಶೀರ್ವದಿಸಿದರು. ಆ ಕ್ಷಣವೇ ಅಮಲ್ದಾರರ ಹೆಂಡತಿ ಮತ್ತು ಮಗ ಅಸ್ವಸ್ಥತೆಯಿಂದ ಮುಕ್ತರಾಗಿ ಮೇಲಕ್ಕೆದ್ದರು. ಆಗ ಅಮಲ್ದಾರರು ಸ್ವಾಮಿಗಳವರನ್ನು ಕಂಡು ಐನೂರು ರೂಪಾಯಿ ಕಾಣಿಕೆಯನ್ನು ಒಪ್ಪಿಸುವ ಇಚ್ಛೆಯನ್ನು ವ್ಯಕ್ತಪಡಿಸಿದರು. ಆಗ ಸ್ವಾಮಿಗಳು "ಈ ಕಾಣಿಕೆಯನ್ನು ನೀವು ಇಲ್ಲಿ ಕೊಡುವುದು ಬೇಡ, ಕೆಲವರು ವಿದ್ವಾಂಸ ಬ್ರಾಹ್ಮಣರೊಂದಿಗೆ ನೀವು ದುರ್ಗದ ಬೃಹನ್ಮಠಕ್ಕೆ ಬಂದು, ಅಲ್ಲೇ ಇದನ್ನು ಒಪ್ಪಿಸಿ" ಎಂದರು. ಮುಂದೆ ಸ್ವಾಮಿಗಳ ಮೆರವಣಿಗೆ ಹೊಳಲ್ಕೆರೆಯಲ್ಲಿ ನಿರಾಂತಕವಾಗಿ ಅತ್ಯುತ್ಸಾಹದಿಂದ ಜರುಗಿತು. ಬಸಪ್ಪನ ಅಭಿಲಾಷೆ ಫಲಿಸಿತು. ಹಾಗೆಯೇ ಮುಂದೆ ಅಮಲ್ದಾರರು ಕೂಡ ಕೆಲವು ವಿದ್ವಾಂಸರೊಂದಿಗೆ ಬೃಹನ್ಮಠಕ್ಕೆ ಆಗಮಿಸಿ ಕಾಣಿಕೆಯನ್ನು ಅರ್ಪಿಸಿದರು. ಆಗ ಸ್ವಾಮಿಗಳು ತಮ್ಮ ಎಲ್ಲ ಬಿರುದಾವಳಿಗಳೊಂದಿಗೆ ಜನ ಇಚ್ಛೆಪಟ್ಟ ಸ್ಥಳದಲ್ಲಿ ಮೆರವಣಿಗೆ ಜರುಗಬಹುದೆಂದು ಮಹಾರಾಜರವರು ಸನ್ನದು ನೀಡಿದ್ದನ್ನು ಅವರೆಲ್ಲರಿಗೂ ತೋರಿಸಿದರು. ಹೀಗೆ ಸ್ವಾಮಿಗಳು ತಮ್ಮ ಎಂದಿನ ಕರ್ತವ್ಯಗಳನ್ನು ನಿರ್ವಹಿಸುತ್ತಾ ಮಠವನ್ನು ಮುನ್ನಡೆಸಿದರು. ಹೀಗೆ ಇರುತ್ತಾ ಒಮ್ಮೆ ದೇಶಮಧ್ಯದ ಎಲ್ಲ ಹರಗುರುಚರಮೂರ್ತಿಗಳನ್ನು ಭಕ್ತರನ್ನು ಪುರಾಣ ಶ್ರವಣಕ್ಕೆ ಬರಬೇಕೆಂದು ನಿರೂಪಗಳನ್ನು ಕಳುಹಿಸಿ ಸಾವಿರಗಟ್ಟಲೇ ಭಕ್ತ ಮಾಹೇಶ್ವರರು ಬೃಹನ್ಮಠದಲ್ಲಿ ಕೂಡಿದಾಗ ಅವರ ಯೋಜನೆಯಂತೆ ದಿನಂಪ್ರತಿ ಪುರಾಣಶ್ರವಣ ಗುರುಲಿಂಗ ಜಂಗಮಾರಾಧನೆ ಇವೆಲ್ಲಾ ನಡೆಯುತ್ತಾ ಬಂದಾಗ, ನಾವು ಇಂತಹ ದಿನ(ಎಂದು ಆ ದಿನವನ್ನು ತಿಳಿಸಿ) ಸಾಂಬಲೋಕಕ್ಕೆ ದಯಮಾಡಿಸುತ್ತೇವೆ ಎಂದು ಘೋಷಿಸಿದರು. ತತ್ಪೂರ್ವದಲ್ಲೇ ಸಿದ್ಧಪಡಿಸಿದ್ದ ಮರಳು ತುಂಬಿಸಿ ಮುಚ್ಚಿಸಿದ್ದ ಸಮಾಧಿಯನ್ನು ತೆರವು ಮಾಡಿಸಿಟ್ಟುಕೊಂಡರು. ಭಕ್ತರು ಅವರ ಈ ನಿರ್ಧಾರವನ್ನು ಕದಲಿಸಲು ಪ್ರಯತ್ನಪಟ್ಟರಾದರೂ ಸಾಧ್ಯವಾಗಲಿಲ್ಲ. ಕಡೆಗೆ ಸರಿಯಾದ ಉತ್ತರಾಧಿಕಾರಿಗಳನ್ನಾದರೂ ತಾವು ನೇಮಿಸಿಕೊಟ್ಟು ಹೋಗಬೇಕು ಎಂಬ ಪ್ರಾರ್ಥನೆಯನ್ನು ಒಪ್ಪಿದ ಸ್ವಾಮಿಗಳು ಸಣ್ಣಪಾದದ ಚನ್ನವೀರ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯಾಗಿ ಘೋಷಿಸಿ ಅವರಿಗೆ ಪಟ್ಟಾಧಿಕಾರವನ್ನು ನೀಡಿದರು. ಅವರು ಹೇಳಿದಂತೆ ಒಂದೆಡೆ ಮುಹೂರ್ತಗೊಂಡು ಕುಳಿತಿದ್ದು ಅಲ್ಲಿಯೇ ಬಯಲಾದರು. ಇವರು ಬಯಲಾದ ವರ್ಷ ಇಸವಿ ೧೮೪೫. ಮುಂದೆ ಅವರ ಉತ್ತರಾಧಿಕಾರಿಗಳಾಗಿ ಹಾವೇರಿ ಸಣ್ಣಪಾದದ ಚನ್ನವೀರ ಸ್ವಾಮಿಗಳು ಪೀಠಾಧೀಶರ ಕರ್ತವ್ಯಗಳನ್ನು ನಿರ್ವಹಿಸತೊಡಗಿದರು.

ಹಾವೇರಿ ಸಣ್ಣಪಾದದ ಚನ್ನವೀರ ಸ್ವಾಮಿಗಳು
ಇವರು ೧೮೪೫ ರಿಂದ ೧೮೬೨ರವರೆಗೆ ಬೃಹನ್ಮಠದ ಪೀಠಾಧೀಶರಾಗಿದ್ದರು. ಇವರು ಹೆಚ್ಚಾಗಿ ಮಠದಲ್ಲಿಯೇ ಇದ್ದು, ಎಲ್ಲ ಪ್ರಾಂತಗಳಿಂದ ಕಾಣಿಕೆ ಮುಂತಾದುವನ್ನು ಸ್ವೀಕರಿಸುತ್ತಾ, ಶಿಷ್ಟ ರಕ್ಷಣೆ ದಾಸೋಹ ಮುಂತಾದವನ್ನು ನಡೆಸುತ್ತಾ ಬಂದರು. ಹೀಗಿರುವಾಗ ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಗ್ರಾಮದಲ್ಲಿದ್ದ ಹಾಲುಮತದ ಕೆಂಚಾಲಪ್ಪಗೌಡ ಎಂಬುವನು ಸ್ವಾಮಿಗಳ ದರ್ಶನ ಮಾಡಿಕೊಂಡು ಸನ್ನಿಧಿ ತನ್ನ ಗ್ರಾಮಕ್ಕೆ ಚಿತ್ತೈಸಬೇಕೆಂದು ಪರಿ ಪರಿಯಾಗಿ ಬೇಡಿಕೊಂಡನು. ಸ್ವಾಮಿಗಳು ಅವನ ಬಿನ್ನಹವನ್ನು ಮನ್ನಿಸಿ ತಮ್ಮೆಲ್ಲಾ ಬಿರುದು ಪರಿವಾರದೊಡನೆ ಆ ಗ್ರಾಮಕ್ಕೆ ತೆರಳಿ ಆ ಗ್ರಾಮದ ಎಲ್ಲ ಭಕ್ತರ ಗೌರವ, ಕಾಣಿಕೆಗಳನ್ನು ಸ್ವೀಕರಿಸಿ, ಅವರನ್ನು ಆಶೀರ್ವದಿಸಿ ಅಲ್ಲಿಂದ ಬೃಹನ್ಮಠಕ್ಕೆ ಮರಳಿದರು. ಈ ಸಂದರ್ಭದಲ್ಲಿ ಮಾಯಕೊಂಡ, ದಾವಣಗೆರೆ ಮತ್ತು ಚಿತ್ರದುರ್ಗದ ಬ್ರಾಹ್ಮಣರು ಕೂಡಿ ಸ್ವಾಮಿಗಳ ಮೆರವಣಿಗೆಗೆ ಅಡ್ಡಿಪಡಿಸಿದರು. ಈ ಸಂಘರ್ಷದ ಸಂಗತಿ ಬೆಂಗಳೂರುವರೆಗೂ ಮುಟ್ಟಿ ಸರ್ಕಾರದವರ ಗಮನಕ್ಕೆ ಬಂದಿತು. ನ್ಯಾಯಾಲಯದಲ್ಲಿ ವಿಚಾರಣೆ ಜರುಗಿ, ಸ್ವಾಮಿಗಳ ಮೆರವಣಿಗೆಯವರ ಪರವಾಗಿ ತೀರ್ಪಾಯಿತು. ಇದಕ್ಕೆ ಅಡ್ಡಿಪಡಿಸುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬಹುದೆಂದೂ ಸಹ ಆದೇಶವಾಯಿತು. ಅಷ್ಟಾದ ಮೇಲೆ ಬ್ರಾಹ್ಮಣರು ಮತ್ತಾವುದೇ ತಕರಾರಿಗೆ ಮುಂದುವರಿಯದೆ ಸುಮ್ಮನಾದರು. ಮುಂದೆ ಸ್ವಾಮಿಗಳು ಮಠದ ಕರ್ತವ್ಯವನ್ನು ಮುಂದುವರೆಸಿಕೊಂಡು ಬಂದು ೧೮೬೨ರಲ್ಲಿ ಲಿಂಗೈಕ್ಯರಾದರು. ಬೃಹನ್ಮಠದ ಪಶ್ಚಿಮದ ಆವರಣದಲ್ಲಿ ಸಾವಳಿಗೆ ಗುರುಶಾಂತ ಸ್ವಾಮಿಗಳವರು ಕಟ್ಟಿಸಿದ್ದ ಚಿದ್ವಿಲಾಸ ಭವನದ ದಕ್ಷಿಣಕ್ಕೆ ಎರಡು ವಿಶಾಲವಾದ ನೆಲಕೋಣೆಗಳನ್ನು ಸಣ್ಣಪಾದದ ಚನ್ನವೀರ ಸ್ವಾಮಿಗಳು ೧೮೫೬ರಲ್ಲಿ ನಿರ್ಮಾಣ ಮಾಡಿಸಿದರು. ಯಾವ ಉದ್ದೇಶಕ್ಕಾಗಿ ಈ ನೆಲಕೋಣೆಗಳನ್ನು ಮಾಡಿಸಿದ್ದರೆಂಬುದು ಸ್ಪಷ್ಟವಿಲ್ಲ. ಈ ಕೋಣೆಗಳು ಇತ್ತೀಚಿನವರೆಗೂ ಅಲ್ಲಿದ್ದವು. ಆದರೆ ಈಚೆಗೆ ಅವುಗಳನ್ನು ಮುಚ್ಚಲಾಗಿದೆ. ಇವರ ತರುವಾಯ ಶಿರಸಂಗಿ ಅಥವಾ ಶಿವಪ್ಯಾಟಿ ಮಹಲಿಂಗ ಸ್ವಾಮಿಗಳವರಿಗೆ ಪಟ್ಟವಾಯಿತು. ಶಿರಸಂಗಿ (ಶಿವಪ್ಯಾಟಿ) ಮಹಾಲಿಂಗ ಸ್ವಾಮಿಗಳು ಇವರು ಮೊದಲಿಗೆ, ಈಗಿನ ಬೆಳಗಾವಿ ಜಿಲ್ಲೆಯ ಶಿವಪ್ಯಾಟಿಗೆ ಸನಿಹದಲ್ಲಿರುವ ಶಿರಸಂಗಿಯಲ್ಲಿ ಇದ್ದರು. ಇವರಿಗೆ ಪಟ್ಟಾಧಿಕಾರವಾದ ಕಾಲಕ್ಕೆ ಸೇರಿದ್ದ ಎಲ್ಲ ಭಕ್ತ ಜನರಿಗೂ ಅವರು ಹೇಳಿದ ಮಾತುಗಳು ಇವು: “ನಮಗೆ ಪಟ್ಟವಾದ ಮೇಲೆ ನಾವು ನಮ್ಮ ಇಚ್ಛೆಯಂತೆ ನಡೆಯುತ್ತೇವೆ. ನಮ್ಮ ಪರಿವಾರದೊಂದಿಗೆ ಎಲ್ಲ ದೇಶಗಳನ್ನು ಸಂಚರಿಸುತ್ತೇವೆ. ಈ ನಮ್ಮ ಇಚ್ಛೆಗೆ ಯಾರೂ ಅಡ್ಡಿ ತರಕೂಡದು. ನಮ್ಮ ಮಾತು ತಮಗೆ ಒಪ್ಪಿಗೆಯಾದರೆ ನಾವು ಪಟ್ಟವನ್ನು ಸ್ವೀಕರಿಸುತ್ತೇವೆ. ಹಾಗಿಲ್ಲದಿದ್ದರೆ ಈ ಪಟ್ಟವು ನಮಗೆ ಬೇಡ, ಬೇಕಾದವರು ಸ್ವೀಕರಿಸಲಿ”. ಆಗ ಎಲ್ಲ ಭಕ್ತ ಜನರು ಅವರ ಮಾತಿಗೆ ತಮ್ಮ ಸಂಪೂರ್ಣ ಒಪ್ಪಿಗೆಯಿದೆ ಎಂದು, ತಮ್ಮ ಆದೇಶ ಅನುಸಾರ ನಡೆಯುವರು ನಾವು ಎಂದು ಶ್ರುತಪಡಿಸಿದರು. ಮಹಲಿಂಗ ಸ್ವಾಮಿಗಳ ಕಾಲದಲ್ಲಿ ನಡೆದ ಒಂದು ಘಟನೆ ಮಹತ್ತ್ವಪೂರ್ಣವಾದದ್ದು. ಬೃಹನ್ಮಠ ವಿದ್ಯಾದಾನದ ಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳಲು ನಾಂದಿಯಾಗುವಂತಹ ಘಟನೆಯೊಂದು ಜರುಗಿತು. ಕನ್ನಡ ನಾಡಿನ ಶಿಕ್ಷಣ ಇತಿಹಾಸದಲ್ಲಿ ಕನ್ನಡಕ್ಕಾಗಿ ಕೊನೆ ಉಸಿರಿನವರೆಗೂ ದುಡಿದು ಹೆಸರಾದ ಡೆಪ್ಯೂಟಿ ಚನ್ನಬಸಪ್ಪನವರು ಬೆಳಗಾವಿಯಲ್ಲಿ ಒಂದು ಕನ್ನಡ ಪಾಠಶಾಲೆಯನ್ನು ಮತ್ತು ವಿದ್ಯಾರ್ಥಿಗಳಿಗಾಗಿ ಒಂದು ಪ್ರಸಾದ ನಿಲಯವನ್ನು ತೆರೆಯಲು ಸ್ವಾಮಿಗಳು ಉದಾರ ನೆರವನ್ನೂ ಪ್ರೋತ್ಸಾಹವನ್ನೂ ನೀಡಿದರು. ಹೀಗೆ ವಿದ್ಯಾರ್ಥಿ ನಿಲಯವನ್ನು ತೆರೆಯಲು ಕಾರಣವಾದ ಪ್ರಪ್ರಥಮ ಜಗದ್ಗುರುಗಳು ಎಂಬ ಕೀರ್ತಿಗೆ ಅವರು ಪಾತ್ರರಾದರು. (ಅಲ್ಲಿಂದ ಪ್ರಾರಂಭವಾದ ಬೃಹನ್ಮಠದ ವಿದ್ಯಾದಾನ ಕಾರ್ಯ ಕ್ರಮೇಣ ಹೆಚ್ಚುತ್ತಾ ಬಂದು ಜಯದೇವ ಸ್ವಾಮಿಗಳ ಕಾಲಕ್ಕೆ ಗಣನೀಯ ಪ್ರಮಾಣಕ್ಕೆ ಮುಟ್ಟಿತು. ಅಲ್ಲಿಂದ ಈಚೆಗೆ ಇನ್ನೂ ಹೆಚ್ಚಿನ ಪ್ರಗತಿಯಾಗಿರುವುದು ಎಲ್ಲರಿಗೂ ತಿಳಿದ ಸಂಗತಿ). ಮುಂದೆ ಇವರ ಉತ್ತರಾಧಿಕಾರಿಯಾಗಿ ಹೆಬ್ಬಾಳು ರುದ್ರ ಸ್ವಾಮಿಗಳು ಪೀಠವನ್ನು ಅಲಂಕರಿಸಿದರು.

ಹೆಬ್ಬಾಳು ರುದ್ರ ಸ್ವಾಮಿಗಳು (ಕ್ರಿ.ಶ. ೧೮೬೯-೧೮೮೧)
ಶಿರಸಂಗಿ ಮಹಾಲಿಂಗ ಸ್ವಾಮಿಗಳು ಲಿಂಗೈಕ್ಯರಾಗುವ ಪೂರ್ವದಲ್ಲಿ ಅಂದರೆ ಒಂದು ವರ್ಷ ಮುಂಚೆ ಹೆಬ್ಬಾಳು ರುದ್ರ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಆಯ್ಕೆ ಮಾಡಿಕೊಂಡಿದ್ದರು. ಹಾಗಾಗಿ ಇವರು ಮಹಾಲಿಂಗ ಸ್ವಾಮಿಗಳ ಅನಂತರದಲ್ಲಿ ಪೀಠಾಧೀಶ ಸ್ಥಾನಕ್ಕೆ ಬರಲು ಯಾವುದೇ ತೊಡಕು ಸಂಭವಿಸಲಿಲ್ಲ. ಇವರು ಮೊದಲಿಗೆ ಚಿತ್ರದುರ್ಗ ಸಮೀಪದ ಹೆಬ್ಬಾಳು ಗ್ರಾಮದ ವಿರಕ್ತಮಠದಲ್ಲಿ ಮಠಾಧಿಪತಿಯಾಗಿದ್ದರು. ಹಾಗಾಗಿ ಇವರಿಗೆ ಹೆಬ್ಬಾಳು ರುದ್ರ ಸ್ವಾಮಿಗಳು ಎಂದು ಕರೆಯಲಾಗಿದೆ. ಬ್ಯಾಡಗಿ ಮುಪ್ಪಿನ ಸ್ವಾಮಿಗಳು
ಈ ಸ್ವಾಮಿಗಳು ಮೊದಲಿಗೆ ಬ್ಯಾಡಗಿಯ ವಿರಕ್ತಮಠದಲ್ಲಿದುದ್ದರಿಂದ ಇವರಿಗೆ ಬ್ಯಾಡಗಿ ಮುಪ್ಪಿನ ಸ್ವಾಮಿಗಳೆಂದು ಕರೆಯಲಾಗಿದೆ. ಇವರು ೧೮೮೧ರಲ್ಲಿ ಶ್ರೀಮಠದ ಪಟ್ಟಾಧಿಕಾರವನ್ನು ವಹಿಸಿಕೊಂಡರು. ಅಲ್ಲಿಂದ ಅವರು ೧೯೦೩ರವರೆಗೆ ಮಠದ ಪರಂಪರೆಯನ್ನು ಮುನ್ನಡೆಸಿದರು. ಸ್ವಾಮಿಗಳು ಹಿಂದಿನ ಗುರುಗಳ ಜಗದ್ಗುರುಗಳ ಪದ್ಧತಿಯಂತೆ ತನ್ನೆಲ್ಲಾ ಪರಿವಾರ, ವಸ್ತು ಪರಿಕರ ಸಮೇತ ಭಕ್ತರು ಇರುವ ಸ್ಥಳಗಳಿಗೆ ಪ್ರವಾಸ ಹೊರಟರು. ಹೀಗೆ ಅವರು ಪ್ರವಾಸ ಹೊರಟು ಮೊದಲು ತಲುಪಿದ್ದು ದಾವಣಗೆರೆಯನ್ನು. ಅಲ್ಲಿ ಪಲ್ಲಾಗಟ್ಟೆ ಬರಮಣ್ಣ ಎಂಬ ಭಕ್ತನ ಆಗ್ರಹದ ಮೇರೆಗೆ ಅವರ ಮನೆಗೆ ಭೇಟಿ ಕೊಟ್ಟಾಗ, ಅವರ ಮನೆಯ ಒಂದು ಮಗುವಿಗೆ ಇನ್ನೇನು ಪ್ರಾಣ ಹೋಗುತ್ತದೆ ಎನ್ನುವಂತಿದ್ದ ಅವಸ್ಥೆ. ಸ್ವಾಮಿಗಳು ಆ ಮಗುವನ್ನು ಸ್ಪರ್ಶಿಸಿ ಭಸ್ಮ ಲೇಪನ ಮಾಡಿದಾಗ ಅದು ಮೊದಲಿನಂತೆ ಆಡತೊಡಗಿತು ಎಂದು ಹೇಳುತ್ತಾರೆ.

ಜಯದೇವ ಸ್ವಾಮಿಗಳು
ಈ ಸ್ವಾಮಿಗಳ ಕಾಲಾವಧಿ ಬೃಹನ್ಮಠದ ಇತಿಹಾಸದಲ್ಲಿ ಅತ್ಯಂತ ಉಲ್ಲೇಖನೀಯವಾದದ್ದು. ಇವರು ಗದುಗಿನ ಹತ್ತಿರ ಬಿನ್ನಾಳವೆಂಬ ಊರಿನಲ್ಲಿ ಹುಟ್ಟಿದವರು. ಗದುಗಿನ ತೋಂಟದಾರ್ಯ ಮಠಕ್ಕೆ ಮರಿಯಾಗಿ ಅಲ್ಲೇ ತಮ್ಮ ಮಾಧ್ಯಮಿಕ ಶಾಲಾ ಶಿಕ್ಷಣ ಮುಗಿಸಿ ಮುಂದೆ ಕಾಶಿಗೆ ಹೋಗಿ ಅನೇಕ ವರ್ಷಗಳ ಕಾಲ ಅಲ್ಲಿ ವಿದ್ಯಾರ್ಜನೆ ಮಾಡಿ ಕರ್ನಾಟಕಕ್ಕೆ ಹಿಂತಿರುಗಿದರು. ಮುಂದೆ ಅವರು ಚಿತ್ರದುರ್ಗದ ಬೃಹನ್ಮಠದ ಪೀಠಾಧೀಶರಾದರು. ಇಲ್ಲಿ ಒಂದು ಸಂಗತಿಯನ್ನು ವಿಶೇಷವಾಗಿ ನೆನಯಬೇಕಾಗಿದೆ. ಇವರು ಈ ಮಠದ ಪೀಠಾಧೀಶರಾದ ಮರುವರ್ಷವೇ ಮೈಸೂರು ಸಂಸ್ಥಾನದ ಮಹಾರಾಜರಾಗಿ ನಾಲ್ವಡಿ ಕೃಷ್ಣರಾಜ ಒಡೆಯರು ಪಟ್ಟಾಭಿಷಿಕ್ತರಾದರು. ಈ ಇಬ್ಬರೂ ತಮ್ಮ ಕಾಲಾವಧಿಯಲ್ಲಿ ಅದ್ಭುತ ಸಾಧನೆಯನ್ನು ಮಾಡಿ ಜಾಜ್ವಲ್ಯಮಾನವಾಗಿ ಬೆಳಗಿದರು. ಹಾಗೆಂದೇ ‘ಕೃಷ್ಣರಾಜ ಒಡೆಯರು ರಾಜಋಷಿ ಎನಿಸಿಕೊಂಡರೆ ಜಯದೇವ ಸ್ವಾಮಿಗಳು ಋಷಿರಾಜರೆನಿಸಿಕೊಂಡರು' ಎಂಬ ಮಾತಿದೆ. ಇವರ ಕಾಲದಲ್ಲಿ ಧರ್ಮಪ್ರಚಾರಕ್ಕೆ ಅದಕ್ಕಿಂತ ಹೆಚ್ಚಾಗಿ ವಿದ್ಯಾಪ್ರಸಾರಕ್ಕೆ ಜಯದೇವ ಸ್ವಾಮಿಗಳು ವಿಶೇಷ ಗಮನಕೊಟ್ಟರು. ಹಳೇಮೈಸೂರು ಪ್ರಾಂತವಷ್ಟೇ ಅಲ್ಲದೇ ಉತ್ತರ ಕರ್ನಾಟಕ, ದಕ್ಷಿಣ ಮಹಾರಾಷ್ಟç ಪ್ರದೇಶದಲ್ಲೂ ಸಹ ಸ್ವಾಮಿಗಳು ಅನೇಕ ಪ್ರಜಾಹಿತ ಕಾರ್ಯಗಳನ್ನು ಕೈಗೊಂಡರು. ಅನೇಕ ಶಿಕ್ಷಣಸಂಸ್ಥೆಗಳು, ವಿದ್ಯಾಲಯಗಳು, ಪ್ರಸಾದನಿಲಯಗಳು, ವಾಚನಾಲಯಗಳು, ಗ್ರಂಥಾಲಯಗಳು, ಮಹಿಳಾ ಸಮಾಜ, ಆಸ್ಪತ್ರೆ, ಕ್ರೀಡಾಂಗಣ, ಹೀಗೆ ಹತ್ತು ಹಲವು ಸಮಾಜೋಪಯೋಗಿ ಕಾರ್ಯಗಳಿಗೆ ಸ್ವಾಮಿಗಳು ಉದಾರವಾಗಿ ಧನಸಹಾಯ ನೀಡಿದರು. ಯಾವುದೇ ಭೇದವಿಲ್ಲದೆ ಎಲ್ಲ ಜಾತಿಗಳ ಬಡ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ನೆರವಾದರು. ಶ್ರೀಗಳವರು ತಮ್ಮ ಸಂಚಾರದಲ್ಲಿ ಭಕ್ತರಿಂದ ಸಂಗ್ರಹವಾದ ಹಣವನ್ನು ತಮ್ಮ ಸ್ವಂತಕ್ಕೆ ಇಲ್ಲವೇ ಮಠದ ಪರಿವಾರದ ಜನರಿಗೆ ಅಥವಾ ಮಠದ ಪ್ರತಿಷ್ಠೆಗೆ ಖರ್ಚು ಮಾಡದೆ, ಬಡ ವಿದ್ಯಾರ್ಥಿಗಳ ಪ್ರಸಾದ ನಿಲಯಗಳ ಸ್ಥಾಪನೆಗೆ, ಉನ್ನತ ಶಿಕ್ಷಣಕ್ಕೆ ವಿದೇಶಕ್ಕೆ ಹೋಗುವ ಪ್ರತಿಭಾವಂತರಿಗೆ ವಿನಿಯೋಗಿಸಿದರು. ಹೀಗೆ ಅನೇಕ ಕಡೆಗಳಲ್ಲಿ ಆದ ವಿದ್ಯಾರ್ಥಿ ನಿಲಯಗಳು ಜಯದೇವ ವಿದ್ಯಾರ್ಥಿ ನಿಲಯಗಳೆಂದು ಹೆಸರಾಗಿವೆ. ಹೀಗೆ ಸ್ಥಾಪಿಸಿದ ವಿದ್ಯಾರ್ಥಿ ನಿಲಯಗಳಲ್ಲಿ ಬ್ರಾಹ್ಮಣ, ಜೈನ, ಮರಾಠ, ಹಾಗು ಮುಸುಲ್ಮಾನ ವಿದ್ಯಾರ್ಥಿಗಳಿಗೂ ಅವಕಾಶ ಸಿಗುವಂತೆ ಮಾಡಿದ್ದರು. ಅವರು ಅನೇಕ ಮುಸ್ಲಿಂ ಸಂಘ ಸಂಸ್ಥೆಗಳಿಗೆ, ದಲಿತರ ಏಳಿಗೆಗೆ, ಉದಾರ ನೆರವು ನೀಡಿದರು. ಅವರಿಂದ ನೆರವು ಪಡೆದ ಇಬ್ಬರು ಪ್ರಮುಖ ವ್ಯಕ್ತಿಗಳನ್ನು ಉದಾಹರಿಸುವುದಾದರೆ, ಒಬ್ಬರು ಮಾಜಿ ಮುಖ್ಯಮಂತ್ರಿಯೂ ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಅಧ್ಯಕ್ಷರೂ ಆಗಿಹೋದ ಸಿದ್ಧವನಹಳ್ಳಿ ನಿಜಲಿಂಗಪ್ಪನವರು; ಲಿಂಗಾಯತ ಕೋಮಿನವರು; ಆದರೆ, ಇನ್ನೊಬ್ಬರು ತಲೆಯ ಮೇಲೆ ಮಲ ಹೊರುವ ಅನಿಷ್ಟ ಪದ್ಧತಿಯನ್ನು ತಪ್ಪಿಸಿದ ಕ್ರಾಂತಿಕಾರಿ ಸಚಿವರೆನಿಸಿದ ಬಿ.ಬಸವಲಿಂಗಪ್ಪನವರು, ದಲಿತ ಕೋಮಿಗೆ ಸೇರಿದವರು. ೧೯೩೪ರಲ್ಲಿ ಗಾಂಧೀಜಿಯವರು ಉತ್ತರ ಕರ್ನಾಟಕಕ್ಕೆ ಬಂದಾಗ ಹಾವೇರಿಯಲ್ಲಿ ಜಯದೇವ ಸ್ವಾಮಿಗಳವರನ್ನು ಅವರು ಇದ್ದ ಮಠದಲ್ಲಿ ಭೇಟಿ ಮಾಡಿದ್ದು ಒಂದು ಅಪರೂಪದ ಘಟನೆ. ಆಗ ಅವರಿಬ್ಬರು ಅಸ್ಪೃಶ್ಯತೆ ನಿವಾರಣೆ, ರಾಷ್ಟ್ರದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿ ಇಂತಹ ವಿಷಯಗಳನ್ನು ಕುರಿತು ಚರ್ಚಿಸಿದರು. ಆಗ ಸ್ವಾಮಿಗಳು ಸ್ವಯಂ ಖಾದಿಯ ಕಾವಿಯನ್ನು ಧರಿಸಲು ನಿಶ್ಚಯಿಸಿದರು; ಗಾಂಧೀಜಿಯವರು ಕೈಕೊಂಡ ಚಳವಳಿಯನ್ನು ಬೆಂಬಲಿಸಿದರು. ಮೈಸೂರು ಸಂಸ್ಥಾನದ ದೊರೆಗಳಾದ ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್‌ರವರು ೧೯೩೭ರಲ್ಲಿ ಶ್ರೀಗಳ ದರ್ಶನಕ್ಕೆ ಬೃಹನ್ಮಠಕ್ಕೆ ಬಂದಿದ್ದಾಗ ಮೈಸೂರಿನ ಆಸ್ಪತ್ರೆ ನಿರ್ಮಾಣದಲ್ಲಿ ರೋಗನಿದಾನ ವಿಭಾಗವೊಂದನ್ನು ಕಟ್ಟಿಸಲು ಸ್ವಾಮಿಗಳು ಉದಾರವಾಗಿ ಕಾಣಿಕೆ ನೀಡುವಂತೆ ಕೇಳಿದಾಗ ನಿಂತ ನಿಲವಿನಲ್ಲೇ ಮಠದಲ್ಲಿದ್ದ ನಲವತ್ತು ಸಾವಿರ ರೂಪಾಯಿಗಳನ್ನು ತಮ್ಮ ಕಾಣಿಕೆಯಾಗಿ ನೀಡಿದರು. ಮೈಸೂರಿನ ಆಸ್ಪತ್ರೆಯ ಸಂಕೀರ್ಣದಲ್ಲಿ ಜಯದೇವ ಸ್ವಾಮಿಗಳ ಹೆಸರಿನಲ್ಲಿ ಆ ವಿಭಾಗವಿರುವುದನ್ನು ಈಗಲೂ ನೋಡಬಹುದು. ಜಯದೇವ ಸ್ವಾಮಿಗಳು ವಿದ್ಯಾದಾನಕ್ಕೆ ತುಂಬ ಪ್ರಾಶಸ್ತ್ಯ ಕೊಟ್ಟದ್ದು ಎಲ್ಲರೂ ಬಲ್ಲ ಸಂಗತಿ. “ಕರ್ನಾಟಕ ಮಠಾಧೀಶ್ವರರು'' ಎಂಬ ಪುಸ್ತಕದಲ್ಲಿ(೧೯೫೩) ಅದರ ಲೇಖಕರಾದ ಎಸ್.ಟಿ. ನೆಸ್ವಿ ಹೇಳುವ ಮಾತು ಹೀಗಿದೆ, “ಭರತ ಖಂಡದಲ್ಲಿ ವಿದ್ಯಾಪ್ರಸಾರಕ್ಕೂ ಅನಾಥರಿಗೂ ಇವರಷ್ಟು ಧನದ ಧಾರೆಯೆರೆದು ಸಹಾಯ ಮಾಡಿದವರು ಯಾವ ಮಠದ ಸ್ವಾಮಿಗಳೂ ಇಲ್ಲವೆಂದು ಧಾರಾಳವಾಗಿ ಹೇಳಬಹುದು... ಅಲ್ಲದೇ ಅನೇಕ ಸಂಘ ಸಂಸ್ಥೆಗಳಿಗೂ ವಾಚನಾಲಯಗಳಿಗೂ, ವಿದ್ಯಾರ್ಥಿ ನಿಲಯಗಳಿಗೂ, ಜಾತಿ ಮತಗಳ ಬೇಧ ಭಾವವಿಲ್ಲದೇ ಹದಿನೆಂಟು ಲಕ್ಷ ರೂಪಾಯಿಗಳಿಗೂ ಮಿಗಿಲಾಗಿ ಸಹಾಯವನ್ನು ಮಾಡಿರುತ್ತಾರೆ, ಜಗದ್ಗುರು ಮಹಾಸ್ವಾಮಿಗಳವರು ಕರ್ನಾಟಕದಲ್ಲಿ ವೀರಶೈವ ಮತದಲ್ಲಿ ಜನ್ಮವೆತ್ತಿದರೂ ಸರ್ವ ದೇಶ, ಸರ್ವ ದರ್ಶನ, ಸರ್ವ ಜೀವಿಗಳಲ್ಲಿ ಇವರ ಪ್ರೇಮವು ಪಸರಿಸಿರುವುದು. ತಮ್ಮಿಂದಲೂ ಮತ್ತು ತಮ್ಮ ಮಠದಿಂದಲೂ ಯಾವತ್ತು ಜೀವಿಗಳಿಗೆ ಸುಖವೂ ಉಪಕಾರವೂ ಆಗಬೇಕೆಂಬುದು ಶ್ರೀಗಳವರ ಮನೀಷೆ. ಶ್ರೀ ಜಗದ್ಗುರು ಮುರುಘರಾಜೇಂದ್ರ ಸ್ವಾಮಿಗಳೆಂದರೆ ಪ್ರೇಮದ ಮೂರ್ತಿ, ಸದ್ಗುಣಗಳ ಖಣಿ, ಧರ್ಮದ ದೇವತೆ, ಸೌಜನ್ಯದ ಆಗರ, ದೀನ ದರಿದ್ರರ ಕೈವಾರಿ'' ಈ ಮಾತುಗಳು ಸ್ವಾಮಿಗಳ ವ್ಯಕ್ತಿತ್ವ ಮತ್ತು ಸಾಧನೆಗೆ ಹಿಡಿದ ಕನ್ನಡಿಯಾಗಿವೆ. ಜಯದೇವ ಸ್ವಾಮಿಗಳು ಶಿಕ್ಷಣ ಪ್ರಸಾರದ ಕಾರ್ಯಕ್ಕಾಗಿ ವಿನಿಯೋಗಿಸಿದ ಹಣದ ಬೃಹತ್ ಪ್ರಮಾಣದ ಮೊತ್ತವನ್ನು ಕುರಿತ ಒಂದು ವಿವರ ಹೀಗಿದೆ: “ಮೈಸೂರಲ್ಲಿ ರೋಗ ಪರಿಹಾರ ಪರೀಕ್ಷೆಯ ಪ್ರಯೋಗಾಲಯ ಶಂಕುಸ್ಥಾಪನೆ ನೆರವೇರಿಸಿದ ಶ್ರೀ ಮಹಾರಾಜರು ತಮ್ಮ ಉಪನ್ಯಾಸದಲ್ಲಿ ೧೮,೦೦,೦೦೦ ರೂಪಾಯಿಗಳನ್ನು ಬೃಹನ್ಮಠ ಮಹಾಸಂಸ್ಥಾನವು ಶಿಕ್ಷಣ ಪ್ರಸಾರಕ್ಕಾಗಿ ವಿನಿಯೋಗಿಸಿರುವುದನ್ನು ಪ್ರಶಂಸಿಸಿದರು''. ಅಲ್ಲದೆ ಹಿಂದಿನ ಮುಖ್ಯಮಂತ್ರಿಗಳಾದ ಎಸ್. ನಿಜಲಿಂಗಪ್ಪನವರು "೫೦,೦೦,೦೦೦ ರೂಪಾಯಿಗಳಿಗೂ ಹೆಚ್ಚು ಹಣ ಲಿಂಗಾಯತ ಮತ್ತು ಲಿಂಗಾಯಿತೇತರ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ಬೃಹನ್ಮಠ ವಿನಿಯೋಗಿಸಿದೆ. ಈಗಿನ ಲೆಕ್ಕಾಚಾರದಲ್ಲಿ ಈ ಮೊತ್ತ ೮-೧೦ ಕೋಟಿಗಳಷ್ಟಾಗಬಹುದು" ಎಂದಿದ್ದಾರೆ. ಹೀಗೆ ಬಹುವಿಧದಲ್ಲಿ ಸ್ವಾಮಿಗಳು ಸಮಾಜದ ಏಳಿಗೆಗೆ ಸ್ಪಂದಿಸಿ ಸಹಾಯ ಮಾಡಿದ್ದಾರೆ. ಗಣ್ಯರ ಮತ್ತು ಜನಸಾಮಾನ್ಯರೆಲ್ಲರ ಪ್ರಶಂಸೆಯನ್ನು ಗಳಿಸಿದ್ದಾರೆ. ೧೯೪೯ರಲ್ಲಿ ಜಯವಿಭವ ಸ್ವಾಮಿಗಳವರನ್ನು ತಮ್ಮ ಉತ್ತರಾಧಿಕಾರಿಗಳನ್ನಾಗಿ ಮಾಡಿದ್ದ ಸ್ವಾಮಿಗಳು ೧೯೫೬ರಲ್ಲಿ ಲಿಂಗೈಕ್ಯರಾದರು. ದಾವಣಗೆರೆ ನಗರದ ಶಿವಯೋಗಿ ಮಂದಿರ(ಶಿವಯೋಗಾಶ್ರಮ)ದ ಆವರಣದಲ್ಲಿ ಅವರ ಗದ್ದುಗೆಯನ್ನು ಮಾಡಲಾಗಿದೆ. ಜಯದೇವ ಸ್ವಾಮಿಗಳು ತಾವು ಭೇಟಿಕೊಟ್ಟ ಊರುಗಳಲ್ಲಿ ಮೊದಲಿಗೆ ವಿಚಾರಿಸುತ್ತಿದ್ದುದು ಅಲ್ಲಿ ವಾಚನಾಲಯ ಇದೆಯೇ ಎಂಬುದು ಮತ್ತು ವಿದ್ಯಾರ್ಥಿಗಳಿಗೆ ಪ್ರಸಾದ ನಿಲಯ ಇದೆಯೇ ಎನ್ನುವುದು. ಆಯಾ ಊರಿನ ಭಕ್ತಾದಿಗಳು ಕೊಟ್ಟ ಹಣವನ್ನು ಆಯಾ ಸ್ಥಳದ ಜವಾಬ್ದಾರಿಯುತ ಜನರ ಒಂದು ಟ್ರಸ್ಟ್ ಮಾಡಿ ಅವರಿಗೆ ಒಪ್ಪಿಸಿ ಅಲ್ಲೆ ಒಂದು ಪ್ರಸಾದ ನಿಲಯ ಮಾಡಲು ಮತ್ತು ನಡೆಸಲು ಅವರಿಗೆ ಜವಾಬ್ದಾರಿ ವಹಿಸುತ್ತಿದ್ದರು. ಹೀಗೆ ರಾಜ್ಯದ ಒಳಗೆ ಮತ್ತು ಹೊರಗೆ ಅನೇಕ ಪ್ರಸಾದ ನಿಲಯಗಳು ಸ್ಥಾಪಿತವಾಗಲು ಅವರು ಕಾರಣರಾದರು. ಚಿತ್ರದುರ್ಗ, ದಾವಣಗೆರೆ, ತುಮಕೂರು, ಬೆಂಗಳೂರು, ನಿಪ್ಪಾಣಿ, ಸತಾರ, ಸಾಂಗ್ಲಿ, ಔದ್, ಮುಂತಾದ ಕಡೆಗಳಲ್ಲಿ ಅವರು ಪ್ರಾರಂಭಿಸಿದ ಪ್ರಸಾದನಿಲಯಗಳು ಅನೇಕ ವಿದ್ಯಾರ್ಥಿಗಳ ಜೀವನ ಬೆಳಗಲು ಅನುಕೂಲ ಉಂಟುಮಾಡಿದುವು. ಹೀಗೆ ತಿಪಟೂರು, ಧಾರವಾಡ, ಹೊಳವನಹಳ್ಳಿ, ಸೋಮಪುರ, ಬ್ಯಾಡಗಿ, ಕಾರವಾರ, ಕೊಲ್ಲಾಪುರ, ಕಾಶಿ ಮೊದಲಾದ ಕಡೆಗಳಲ್ಲಿ ಶಾಖಾಮಠಗಳಲ್ಲಿಯೇ ವಿದ್ಯಾರ್ಥಿಗಳಿಗೆ ಊಟ ವಸತಿಗಳಿಗೆ ಅನುಕೂಲವನ್ನು ಕಲ್ಪಿಸಿದರು. ಇದಲ್ಲದೇ ದಲಿತರ, ಭೋವಿಗಳ ವಿದ್ಯಾರ್ಥಿ ನಿಲಯಗಳಿಗೂ ದೇಣಿಗೆಯನ್ನು ನೀಡಿದ್ದರು. ಹಾವೇರಿಯಲ್ಲಿ ದಲಿತ ವಿದ್ಯಾರ್ಥಿಗಳಿಗಾಗಿ ಶಾಲಾ ಕಟ್ಟಡವನ್ನು ನಿರ್ಮಾಣ ಮಾಡಿಸಿದರು. ಕೊಲ್ಲಾಪುರದಲ್ಲಿ ಜೈನ, ಮರಾಠ, ಮುಸ್ಲಿಂ ವಿದ್ಯಾರ್ಥಿಗಳಿಗೆ ಧನ ಸಹಾಯ ಮಾಡಿದರು. ತದನಂತರದಲ್ಲಿ ಮತ್ತೆ ಹಲವೆಡೆ ಪ್ರಸಾದ ನಿಲಯಗಳು ಸ್ಥಾಪನೆಯಾಗಿ ನಡೆದುಕೊಂಡು ಬರುತ್ತಿವೆ. ಶಿರಸಂಗಿಯ ಲಿಂಗರಾಜರು, ಅರಟಾಳ ರುದ್ರಗೌಡರು, ವಾರದ ಮಲ್ಲಪ್ಪನವರು ಇವರೇ ಮುಂತಾದ ವೀರಶೈವ ಗಣ್ಯರು ಶಿಕ್ಷಣ ಕ್ಷೇತ್ರಕ್ಕೆ ನಾನಾ ವಿಧವಾಗಿ ಕೊಡುಗೆಗಳನ್ನೀಯಲು ಸ್ವಾಮಿಗಳವರ ಪ್ರೇರಣೆ ಕಾರಣವಾಯಿತು. ಹೀಗೆ ಸ್ವಾಮಿಗಳು ಅನೇಕರನ್ನು ಶಿಕ್ಷಣದತ್ತ ಮುಖ ಮಾಡುವಂತೆ ಮಾಡಿದರು. ‘ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ' ಎಂಬ ಬಸವಣ್ಣನವರ ವಾಣಿಯನ್ನು ನಿಜ ಮಾಡುವಂತೆ ಕ್ರಿಯಾಶೀಲವಾಗಿ ಬೆಳಗಿದರು.

ಜಯವಿಭವ ಸ್ವಾಮಿಗಳು
ಜಯದೇವ ಸ್ವಾಮಿಗಳು ಇರುವಾಗಲೇ ಅವರ ಉತ್ತರಾಧಿಕಾರಿಗಳಾಗಿ ೧೯೪೯ರಲ್ಲಿ ಆಯ್ಕೆಯಾಗಿದ್ದವರು ಜಯವಿಭವ ಸ್ವಾಮಿಗಳು. ಜಯದೇವ ಸ್ವಾಮಿಗಳ ಕೃಪಾದೃಷ್ಟಿ ಇವರು ಇನ್ನು ಚಿಕ್ಕವರಿದ್ದಾಗಲೇ ಇವರ ಮೇಲೆ ಬಿದ್ದು ಅವರ ನೆರವಿನಿಂದ ಕಾಶಿಯಲ್ಲಿ ಸಾಹಿತ್ಯ, ಶಾಸ್ತçಗಳನ್ನು ಅಧ್ಯಯನ ಮಾಡಿದ್ದ ವಿದ್ವಾಂಸರು ಇವರು. ಇವರಿಗೆ ಜಯವಿಭವ ಎಂಬ ಹೆಸರು ಕೊಟ್ಟವರು ಜಯದೇವ ಸ್ವಾಮಿಗಳೇ. ೧೯೫೬ರಲ್ಲಿ ಜಯದೇವ ಸ್ವಾಮಿಗಳು ಲಿಂಗೈಕ್ಯರಾದ ಮೇಲೆ ಶ್ರೀಮಠವನ್ನು ಮುನ್ನಡೆಸುವ ಹೊಣೆ ಇವರದಾಯಿತು. ಶ್ರೀಮಠದ ಧಾರ್ಮಿಕ ಚಟುವಟಿಕೆಗಳು ಸಾಮಾಜಿಕ ಕಾಳಜಿಯ ಕೆಲಸಗಳನ್ನು ಸ್ವಾಮಿಗಳು ಸದ್ದುಗದ್ದವಿಲ್ಲದೇ ನಿರ್ವಹಿಸುತ್ತಾ ಬಂದರು. ಇವರ ಕಾಲದ ಉಲ್ಲೇಖನೀಯವಾದ ಒಂದು ಸಂದರ್ಭ ಹೀಗಿದೆ: ೧೯೬೨ರಲ್ಲಿ ಚೀನಾ ದೇಶದವರು ಉತ್ತರದ ಕಾಶ್ಮೀರ, ವಾಯವ್ಯದ ಗಡಿನಾಡು ರಾಜ್ಯಗಳ ಮೇಲೆ ಸೈನ್ಯದ ದಾಳಿ ಕೈಕೊಂಡಾಗ ಅದನ್ನು ಭಾರತಕ್ಕೆ ಎದುರಿಸುವುದು ಕಷ್ಟವಾಯಿತು. ಸೈನ್ಯಬಲ, ಯುದ್ಧೋಪಕರಣಗಳು, ಆಧುನಿಕ ಶಸ್ತ್ರಾಸ್ತ್ರಗಳು, ಇವೇ ಮುಂತಾದವು ಹೆಚ್ಚಿನ ಸಂಖ್ಯೆಯಲ್ಲಿ ಇರಲಿಲ್ಲ. ಚೀನಾ ಇಂತಹದೊಂದು ಹಠಾತ್ ದಾಳಿ ಮಾಡಬಹುದೆಂಬ ಕಲ್ಪನೆಯೂ ಇರಲಿಲ್ಲ. ಹಾಗಾಗಿ ಇಂಥ ದಾಳಿಯನ್ನು ಎದುರಿಸುವ ನಿಟ್ಟಿನಲ್ಲಿ ಭಾರತ ಸನ್ನದ್ಧಗೊಳ್ಳಬೇಕೆಂಬ ಯೋಚನೆ ಅಂದಿನ ರಾಷ್ಟçನಾಯಕರಲ್ಲಿ ಮೂಡಿತು. ಅದಕ್ಕಾಗಿ ರಕ್ಷಣಾ ನಿಧಿಯನ್ನು ಸಂಗ್ರಹಿಸತೊಡಗಿದರು. ಉತ್ಸವದ ದಿನಗಳಂದು ಶ್ರೀಮಠದ ಪೀಠಾಧೀಶರು ಧರಿಸುತ್ತಿದ್ದ ಚಿನ್ನದ ಕಿರೀಟ, ಉಂಗುರಗಳು, ಸಾವಿರಾರು ರೂಪಾಯಿಗಳ ಮೊತ್ತ ಇವನ್ನು ಜಯವಿಭವ ಸ್ವಾಮಿಗಳು ರಾಷ್ಟ್ರೀಯ ರಕ್ಷಣಾ ನಿಧಿಗೆ ಸಮರ್ಪಿಸಿದರು. ಮಠವೊಂದರ ಪೀಠಾಧೀಶರಾಗಿ ಅವರು ಸುಮ್ಮನೆ ತಮ್ಮ ಪಾಡಿಗೆ ತಾವು ಇರುವ ಬದಲು ಅಮೂಲ್ಯ ನಿಧಿಯನ್ನು ಸಮರ್ಪಿಸುವ ಮೂಲಕ ರಾಷ್ಟ್ರಪ್ರೇಮವನ್ನು ಮೆರೆದರು. ಅವರ ಆ ಕೊಡುಗೆ ನಮ್ಮ ದೇಶದ ಮಠಾಧಿಪತಿಗಳಿಗೆ ಮಾದರಿಯಾಗುವಂಥಾದ್ದು. ತುಂಬ ಸರಳರು, ಮೃದುಭಾಷಿಗಳು, ಸತ್ಕಾರ್ಯನಿರತರೂ ಆಗಿದ್ದ ಸ್ವಾಮಿಗಳು ೧೯೬೪ರಲ್ಲಿ ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಲಿಂಗೈಕ್ಯರಾದರು.

ಮಲ್ಲಿಕಾರ್ಜುನ ಸ್ವಾಮಿಗಳು
ಮಲ್ಲಿಕಾರ್ಜುನ ಸ್ವಾಮಿಗಳು ೧೯೬೪ರಿಂದ ೧೯೯೪ರವರೆಗೆ ಮೂವತ್ತು ವರ್ಷಗಳ ಸುದೀರ್ಘ ಕಾಲ ಬೃಹನ್ಮಠದ ಪೀಠಾಧೀಶರಾಗಿ ಮಠವನ್ನು ಮಠದ ಕಾರ್ಯ ಯೋಜನೆಗಳನ್ನು ವಿಸ್ತರಿಸಿದರು. ಹಿಂದಿನ ಬಿಜಾಪುರ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಕಾಜಿಬೀಳಗಿ ಎಂಬ ಗ್ರಾಮದಲ್ಲಿ ೧೯೧೭ರಲ್ಲಿ ಜನಿಸಿದ ಇವರು ಅಥಣಿಯ ಗಚ್ಚಿನಮಠದ ಸಿದ್ಧಲಿಂಗ ಸ್ವಾಮಿಗಳ ಕೃಪಾದೃಷ್ಟಿಗೆ ಬಿದ್ದು ಅಲ್ಲಿಯೇ ಮರಿಯಾಗಿ ಸೇರ್ಪಡೆಯಾದರು. ಅವರು ಅಲ್ಲಿರುವಾಗಲೇ ಚಿತ್ರದುರ್ಗ ಬೃಹನ್ಮಠದ ಆಗಿನ ಜಗದ್ಗುರುಗಳಾಗಿದ್ದ ಜಯದೇವ ಸ್ವಾಮಿಗಳ ಕಣ್ಣಿಗೆ ಬಿದ್ದು ಸಂಸ್ಕೃತದ ವಿದ್ಯಾಭ್ಯಾಸಕ್ಕಾಗಿ ಕಾಶಿಗೆ ಕಳುಹಿಸಲ್ಪಟ್ಟರು. ಅಲ್ಲಿ ಅನೇಕ ವರ್ಷಗಳ ಕಾಲ ಅಭ್ಯಾಸ ಮಾಡಿದ ಶ್ರೀಗಳು ವ್ಯಾಕರಣಾಚಾರ್ಯ ಎಂಬ ಉನ್ನತ ಪದವಿಯನ್ನು ಪಡೆದರು. ಕಾಶಿಯಿಂದ ಬಂದ ಮೇಲೆ ಇವರು ಜಯದೇವ ಜಗದ್ಗುರುಗಳ ಆದೇಶದಂತೆ ತಿಪಟೂರಿನ ವೀರಶೈವಾನಂದಾಶ್ರಮ ಮತ್ತು ದಾವಣಗೆರೆಯ ವಿರಕ್ತ ಮಠದಲ್ಲಿ ಕೆಲವು ಕಾಲ ಇದ್ದರು. ಮುಂದೆ ಇವರು ಹಾವೇರಿಯ ಹೊಸಮಠದಲ್ಲಿದ್ದರು. ೧೯೬೪ರಿಂದ ೧೯೭೪ರವರೆಗೆ ಹದಿನೆಂಟು ವರ್ಷಗಳ ಕಾಲ ಅಲ್ಲಿದ್ದ ಸ್ವಾಮಿಗಳು ಆ ಮಠವನ್ನು ಸಾಕಷ್ಟು ಅಭಿವೃದ್ಧಿಪಡಿಸಿ, ಚಿತ್ರದುರ್ಗಕ್ಕೆ ಬಂದು ಬೃಹನ್ಮಠದ ಪೀಠಾಧೀಶರಾಗಿ ಕರ್ತವ್ಯಗಳನ್ನು ವಹಿಸಿಕೊಂಡರು. ಜಯದೇವ ಸ್ವಾಮಿಗಳು ಪ್ರಾರಂಭಿಸಿದ್ದ ಶಿಕ್ಷಣ ಪ್ರಸಾರ ಕಾರ್ಯಗಳನ್ನು ಇವರು ಇನ್ನೊಂದು ನಿಟ್ಟಿನಲ್ಲಿ ಮುಂದುವರಿಸಿದರು. ಅದಕ್ಕಾಗಿ ಶ್ರೀ ಜಗದ್ಗುರು ಮುರುಘರಾಜೇಂದ್ರ ವಿದ್ಯಾಪೀಠವನ್ನು ಸ್ಥಾಪಿಸಿದರು. ಅದರ ಮೂಲಕ ಅನೇಕ ಶಿಕ್ಷಣ ಸಂಸ್ಥೆಗಳು ಪ್ರಾರಂಭಗೊಂಡು ಉನ್ನತಮಟ್ಟದ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. ಶಿಶುವಿಹಾರಗಳಿಂದ ಹಿಡಿದು ಪ್ರಾಥಮಿಕ, ಮಾಧ್ಯಮಿಕ, ಪ್ರೌಢಶಾಲೆಗಳು, ಪದವಿಪೂರ್ವ, ಪದವಿ, ತಾಂತ್ರಿಕ, ದಂತ ವೈದ್ಯಕೀಯ ಮುಂತಾದ ಕಾಲೇಜುಗಳು, ತಂತ್ರಜ್ಞಾನ, ಔಷಧ ವಿಜ್ಞಾನ, ರೇಷ್ಮೆಕೃಷಿ, ವೃತ್ತಿಶಿಕ್ಷಣ, ಶುಶ್ರೂಷೆ, ಲಲಿತಕಲೆ ಮುಂತಾದ ವಿಷಯಗಳ ಶಿಕ್ಷಣ ಸಂಸ್ಥೆಗಳು ಹೀಗೆ ನೂರಾರು ವಿದ್ಯಾಲಯಗಳು ಅನೇಕ ವಿದ್ಯಾರ್ಥಿ ನಿಲಯಗಳು, ವಿದ್ಯಾಪೀಠದ ಮೂಲಕ ನಡೆಯುವಂತೆ ವ್ಯವಸ್ಥೆ ಮಾಡಿದರು. ವೈದ್ಯಕೀಯ ಕಾಲೇಜನ್ನು ಪ್ರಾರಂಭಿಸಬೇಕೆಂಬ ಇವರ ಇಚ್ಛೆ ಇವರಿದ್ದಾಗ ಈಡೇರಲಿಲ್ಲ. ಮುಂದೆ ಅವರ ಉತ್ತರಾಧಿಕಾರಿಯಾಗಿ ಬಂದ ಶಿವಮೂರ್ತಿ ಮುರುಘಾ ಶರಣರು ಅದನ್ನು ಈಡೇರಿಸಿದ್ದಾರೆ. ಇದು ಶಿಕ್ಷಣ ಕ್ಷೇತ್ರಕ್ಕೆ ಸಮಾಜಕ್ಕೆ ಅವರು ನೀಡಿದ ಮಹತ್ತರ ಕೊಡುಗೆ ಎನಿಸಿದೆ. ಪ್ರತಿಭಾವಂತ ವಿದ್ಯಾರ್ಥಿಗಳು, ವಿದ್ವಾಂಸರು, ಕಲಾವಿದರು, ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಶ್ರೀಗಳು ಪ್ರೋತ್ಸಾಹಿಸುತ್ತಿದ್ದರು. ಸಂಗೀತಪಟುಗಳು, ಕುಸ್ತಿಪಟುಗಳು, ಕ್ರೀಡಾಪಟುಗಳು, ಚಿತ್ರಕಲಾವಿದರು ಮುಂತಾದವರಿಗೆ ಸ್ವಾಮಿಗಳು ವಿಶೇಷ ಉತ್ತೇಜನ ನೀಡಿದ್ದರು. ‘ಶ್ರೀ ಜಗದ್ಗುರು ಮುರುಘರಾಜೇಂದ್ರ ಗ್ರಂಥಮಾಲೆ' ಎಂಬ ಪ್ರಕಾಶನವನ್ನು ಪ್ರಾರಂಭಿಸಿ ಅನೇಕ ಗಂಭೀರ ಗ್ರಂಥಗಳನ್ನು ಪ್ರಕಟಿಸಿದರು. ಇದಲ್ಲದೆ ‘ಗುರುಕುಲ', ‘ಸತ್ಯಶುದ್ಧ ಕಾಯಕ' ತ್ರೈಮಾಸಿಕಗಳನ್ನು ಕೆಲವು ಕಾಲ ಹೊರತಂದರು. ‘ಜನವಾಹಿನಿ' ಎಂಬ ಕನ್ನಡ ದಿನಪತ್ರಿಕೆಯನ್ನು ಕೆಲವು ಕಾಲ ಪ್ರಕಟಿಸಿದರು. ವಚನ ಸಾಹಿತ್ಯವನ್ನು ಹಿಂದಿ ಭಾಷೆಗೆ ಅನುವಾದಿಸಿ ಪ್ರಕಟಿಸಲು ಮೈಸೂರು ವಿಶ್ವವಿದ್ಯಾನಿಲಯಕ್ಕೆ ಒಂದುವರೆ ಲಕ್ಷ ರೂಪಾಯಿಗಳು ಮತ್ತು ವಚನ ಸಾಹಿತ್ಯ ಕುರಿತ ಗ್ರಂಥ ಪ್ರಕಟಣೆಗೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಒಂದು ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದರು. ಶ್ರೀಮಠಕ್ಕೆ ಸೇರಿದ ಜಮೀನುಗಳ ಬೇಸಾಯ, ತೋಟಗಾರಿಕೆ, ಹೈನುಗಾರಿಕೆಯನ್ನು ಪ್ರಾರಂಭಿಸಿ ಅನೇಕರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸಿದರು. ಬೃಹನ್ಮಠದ ಹಿಂಬದಿಯಲ್ಲಿ ಜೀರ್ಣವಾಗಿದ್ದ ಹಿಂದಿನ ಚಿದಾರಣ್ಯಕ್ಕೆ ಹೊಸ ಚೇತನವನ್ನು ತುಂಬಿ ‘ಮುರುಘಾವನ' ಎಂಬ ಸುಂದರ ವಿಶಾಲ ವನ ರೂಪುಗೊಳ್ಳಲು ಕಾರಣರಾದರು. ಆಶ್ರಯವಿಲ್ಲದ ಅನೇಕ ಬಡವರು, ಹಿಂದುಳಿದವರು, ಮತ್ತು ದಲಿತರಿಗೆ ಮನೆಕಟ್ಟಿಕೊಳ್ಳಲು ಭೂಮಿಯನ್ನು ಉಚಿತವಾಗಿ ನೀಡಿದರು. ಶ್ರೀಗಳು ಇದ್ದ ಕಾಲಾವಧಿಯಲ್ಲಿ ನಡೆದ ಶ್ರೀ ಜಯದೇವ ಜಗದ್ಗುರುಗಳ ಜನ್ಮಶತಾಬ್ದಿ(೧೯೭೫), ೧೯೮೯ರಲ್ಲಿ ಅವರ ಪೀಠಾರೋಹಣ ರಜತ ಮಹೋತ್ಸವ, ೧೯೯೧ರಲ್ಲಿ ಶ್ರೀ ಜಗದ್ಗುರುಗಳ ಪಟ್ಟಾಧಿಕಾರ ಮಹೋತ್ಸವ ಇವು ಬಹುದೊಡ್ಡ ಸಮಾರಂಭಗಳು. ಶ್ರೀಮಠದ ವತಿಯಿಂದ ಹಿಂದೆ ಬೇರೆ ಬೇರೆ ಊರುಗಳಲ್ಲಿ ನಡೆಯುತ್ತಿದ್ದ ದಸರಾ ಉತ್ಸವ ಇವರ ಕಾಲದಲ್ಲಿ ಚಿತ್ರದುರ್ಗದಲ್ಲಿಯೇ ನಡೆಯುವಂತಾಯಿತಲ್ಲದೆ ಮೈಸೂರು ದಸರಾ ಬಿಟ್ಟರೆ ನಾಡಿನಲ್ಲೇ ಎರಡನೆಯದು ಎನಿಸಿತು. ಹೆಚ್ಚಿನ ವಯಸ್ಸಿನಿಂದ ದೈಹಿಕ ನಿಶ್ಶಕ್ತಿಯಿಂದ ಮಾಡಬೇಕಾಗಿರುವ ಕಾರ್ಯ ಬಾಹುಳ್ಯದಿಂದ ಸ್ವಾಮಿಗಳು ಉತ್ತರಾಧಿಕಾರಿಯೊಬ್ಬರನ್ನು ಹುಡುಕಲೇ ಬೇಕಾಯಿತು. ೧೯೯೧ರಲ್ಲಿ ಕಿರಿಯ ವಯಸ್ಸಿನವರಾದರೂ ಕ್ರಿಯಾಶೀಲರೆಂದು ಭರವಸೆ ಮೂಡಿಸಿದ್ದ ಹಾವೇರಿ ಹೊಸಮಠದಲ್ಲಿದ್ದ ಶಿವಮೂರ್ತಿ ಸ್ವಾಮಿಗಳನ್ನು ತಮ್ಮ ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಿಕೊಂಡರು. ೧೯೯೪ರಲ್ಲಿ ಅನಾರೋಗ್ಯದ ನಿಮಿತ್ತ ಬೆಂಗಳೂರಿಗೆ ತೆರಳಿದ್ದ ಸ್ವಾಮಿಗಳು ಅಲ್ಲಿಯ ಮಣಿಪಾಲ್ ಆಸ್ಪತ್ರೆಯಲ್ಲಿ ಇಹಲೋಕವನ್ನು ತ್ಯಜಿಸಿದರು. ಹೊಳಲ್ಕೆರೆಯ ಒಂಟಿಕಂಬದ ಮಠವನ್ನು ಅದೇ ವರ್ಷ ಅಲ್ಲಿಗೆ ಭೇಟಿಕೊಟ್ಟಿದ್ದಾಗ ಅಲ್ಲಿಯ ಸುಂದರ ಪ್ರಶಾಂತ ಪರಿಸರವನ್ನು ನೋಡಿದ್ದ ಸ್ವಾಮಿಗಳು ಮುಂದೆ ತಮ್ಮ ಗದ್ದುಗೆ ಅಲ್ಲಿಯೇ ಆಗಬೇಕೆಂದು ಇಚ್ಛೆಪಟ್ಟಿದ್ದರು. ಅದರಂತೆ ಅವರ ಗದ್ದುಗೆಯನ್ನು ಅಲ್ಲಿಯೇ ಮಾಡಲಾಯಿತು. ಕರ್ನಾಟಕ ಸರ್ಕಾರ ಕುಶಾಲ ತೋಪುಗಳನ್ನು ಹಾರಿಸುವುದರ ಮೂಲಕ ಶ್ರೀಗಳವರಿಗೆ ಗೌರವ ತೋರಿದರೆ, ಆ ಸಂದರ್ಭದಲ್ಲಿ ಅನೇಕ ಸ್ಥಳಗಳಿಂದ ಬಂದಿದ್ದ ಅಸಂಖ್ಯಾತ ಭಕ್ತರು ಶ್ರೀಗಳಿಗೆ ಶ್ರದ್ಧಾಂಜಲಿಯನ್ನು ಅರ್ಪಿಸಿದರು. ಅವರ ಅಪಾರ ಪಾಂಡಿತ್ಯ, ಉದ್ಬೋಧಕ ಭಾಷಣ, ಸಮಾಜದ ಏಳಿಗೆಯ ಕಾರ್ಯಗಳು, ಶಿಕ್ಷಣ ಪ್ರಸಾರದ ಆಸಕ್ತಿ ಇವೇ ಮುಂತಾದ ಅವರ ವ್ಯಕ್ತಿತ್ವದ ವಿಶೇಷವನ್ನು ಜನ ತಮ್ಮ ಹೃನ್ಮನಗಳಲ್ಲಿ ತುಂಬಿಕೊಂಡಿದ್ದಾರೆ.